Tree or Vine?! ತರುವೋ, ಲತೆಯೋ?! ಪಲ್ಲೆಕಾಯಿ ಬಳ್ಳಿಯ ಕಾಂಡ |
ಲತೆ(ಬಳ್ಳಿ)ಯಂಥಾ ತರು(ಮರ),
ಅಥವಾ ತರುವಿನಂಥಾ ಲತೆ?!
‘ಲತೆ’, ‘ತರು’ವ ಬಯಸುವುದು ಸಹಜ
‘ತರು’ವೇ ‘ಲತೆ’ ಯಂತಾದರೆ ‘ಲತೆ’ ಬಯಸುವಳೇ...
ಇದು ‘ಲತೆ’ಯೇ ಹೌದಾದರೆ
‘ತರು’ವಿನಂಥಾ ‘ಲತೆ’ಯ ‘ತರು’ ಒಪ್ಪುವುದೇ?!
‘ಹೆಣ್ಣಿಗ’ನ ಕಟ್ಟಿಕೊಂಡ ಹುಡುಗಿಯಂತೆ,
‘ಗಂಡುಭೀರಿ’ಯ ಕಟ್ಟಿಕೊಂಡ ಹುಡುಗನಂತೆ
![]() | |||
Callingcard Vine, Centre for Ecological Sciences,IISc, Bangalore, ಪಾಲೆಕಾಯಿ ಬಳ್ಳಿ ಪರಿಸರ ವಿಜ್ಞಾನ ಕೇಂದ್ರ, ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು |
ಜತೆಯ ತರು ಲತೆಗಳು ಅನುಭವಿಸಬೇಕು
ಅಥವಾ
ಇದನ್ನು ಎರಡೂ ಸುಖವನುಭವಿಸುವ ‘ಭೋಗಿ’ ಎನ್ನೋಣವೇ?
ಇದನ್ನು ಎರಡೂ ಸುಖವನುಭವಿಸುವ ‘ಭೋಗಿ’ ಎನ್ನೋಣವೇ?
‘ಲತೆ’ಗೆ ‘ತರು’ವಾಗಿ, ‘ತರು’ವಿಗೆ ‘ಲತೆ’ಯಾಗಿ…
ಸಾಕು, ಜಾಸ್ತಿಯಾಯಿತು ನನ್ನ ಪುರಾಣ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (IISc) ಆವರಣದ ಪರಿಸರ ವಿಜ್ಞಾನ ಕೇಂದ್ರದ (Centre for Ecological Science) ಮುಂದಿನ ಅಪರೂಪದ, ಬಳ್ಳಿ-ಮರದಂಥಾ ಸಸ್ಯ.
ನಾನೊಬ್ಬ ಸಸ್ಯಶಾಸ್ತ್ರಿ ಅಲ್ಲದ್ದರಿಂದ ಹೆಚ್ಚಿನ ವಿವರಗಳು ನನ್ನಲ್ಲಿಲ್ಲ. ಅಲ್ಲಿಯ ಗಿಡದ ಮೇಲಿನ ಫಲಕದ ಪ್ರಕಾರ ಇದು ಭಾರತ, ಶ್ರೀಲಂಕಾ, ಆಫ್ರಿಕಾವನ್ನು ತವರಾಗಿ ಹೊಂದಿದ ಎಪ್ರಿಲ್‌ನಲ್ಲಿ ಹೂಬಿಡುವ Mimosaceae ಸಸ್ಯಶಾಸ್ತ್ರ ಕುಟುಂಬಕ್ಕೆ ಸೇರಿದ ಸಸ್ಯ.
ಸಸ್ಯಶಾಸ್ತ್ರೀಯ ಹೆಸರು: Entada rheedei Spreng
ಇಂಗ್ಲೀಷ್ ಹೆಸರು: Callingcard Vine
ಇಂಗ್ಲೀಷ್ ಹೆಸರು: Callingcard Vine
ಕನ್ನಡದಲ್ಲಿ ‘ಪಲ್ಲೆಕಾಯಿ ಬಳ್ಳಿ’ ಎನ್ನುತ್ತಾರಂತೆ.
ಭಾರತೀಯ ವಿಜ್ಞಾನ ಮಂದಿರ ಮುಸ್ಸಂಜೆಯಲ್ಲಿ |
ಭಾರತೀಯ ವಿಜ್ಞಾನ ಮಂದಿರ ಆಡಳಿತ ಕಛೇರಿ. |
ರಸ್ತೆಗೆ ನುಗ್ಗುತ್ತಿರುವ ಮರದ ಕೊಂಬೆಗೆ ಆಧಾರ ಕೊಟ್ಟು ರಕ್ಷಿಸಿರುವುದು. ಬೇರೆಡೆ ಆಗಿದ್ದರೆ ಕೊಂಬೆ ಉಳಿಯುತ್ತಿದ್ದುದ್ದು ಸಂಶಯ. |
ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಸಂಸ್ಥೆ ಭಾರತೀಯ ವಿಜ್ಞಾನ ಮಂದಿರ, ಅಲ್ಲಿನ ಆಡಳಿತ, ಮತ್ತು ವಿದ್ಯಾರ್ಥಿಗಳ ಪರಿಸರ ಕಾಳಜಿ, ಅಲ್ಲಿ ಹೋದವರನ್ನ ಮುಟ್ಟದೇ ಬಿಡುವುದಿಲ್ಲ ಅಲ್ಲಿ ಹೋಗಿಯೇ ಸವಿಯಬೇಕು. ತಾನಾಗೇ ಬಿದ್ದ ಮರವನ್ನೂ ತೆಗೆಯದೇ, ಕಗ್ಗಾಡಿನ ನಡುವೆ ಆ ಮರ ಹೇಗೆ ಗೆದ್ದಲು, ಮೊದಲಾದ ಜೀವ ಜಂತುಗಳಿಗೆ ಆಹಾರವಾಗಿ, ವರ್ಷಗಳ ನಂತರ ಇಲ್ಲವಾಗುತ್ತದೋ ಹಾಗೆಯೇ ಇಲ್ಲೂ ಅಂತೆ, ಅಲ್ಲಿನ ವಿದ್ಯಾರ್ಥಿನಿ ಹೇಳಿದ ಮಾತು, ಅಲ್ಲಿ ಈ ವನರಾಜಿಯನ್ನ ರಕ್ಷಿಸಲು ವಿದ್ಯಾರ್ಥಿ ಸಮೂಹ ಟೊಂಕ ಕಟ್ಟಿ ನಿಂತಿರುತ್ತದೆ. ಇಲ್ಲದಿದ್ದರೆ ಬೆಂಗಳೂರಿನ ಉಳಿದ ರಸ್ತೆ ಮರಗಳಂತೆ ಇಲ್ಲೂ ಎಲ್ಲವೂ ನೆಲಸಮವಾಗಿರುತ್ತಿತ್ತು ಎಂದಳು. ಮರವಿರಲಿ, ಒಂದು ಕೊಂಬೆಯನ್ನು ಕಡಿಯುವುದು ಸಹ ಇಲ್ಲಿ ಸುಲಭವಲ್ಲ. ಕ್ಯಾಂಪಸ್‌ನೊಳಗಿನ ರಸ್ತೆಗಳಿಗೆ ನುಗ್ಗುವ ಮರದ ಕೊಂಬೆಗಳನ್ನೂ ಕತ್ತರಿಸದೇ, ಆಧಾರ ನೀಡಿ ರಕ್ಷಿಸಿ, ಕಾಂಕ್ರಿಟ್ ಕಾಡು ಬೆಂಗಳೂರಿನ ಮಧ್ಯೆ, ಜಗತ್ತಿನ ನಿತ್ಯಹರಿದ್ವರ್ಣದ ಕಾಡುಗಳಿಂದ ತಂದ ಮರಗಳ ವನಸಿರಿ ನಿಮ್ಮನ್ನ ಸೆಳೆಯದಿದ್ದರೆ ಕೇಳಿ. ಅಲ್ಲಿನ ಪ್ರತಿ ರಸ್ತೆಯೂ ಒಂದು ಮರದ ಹೆಸರಿನಲ್ಲಿ, ಉದಾಹರಣೆಗೆ, ಗುಲ್ ಮೊಹರ್ ಮಾರ್ಗ, ಮಹಾಗೊನಿ ಮಾರ್ಗ, ಅಂದರೆ ಗುಲ್ ಮೊಹರ್ ಮಾರ್ಗದ ಇಕ್ಕೆಲಗಳಲ್ಲಿ ಗುಲ್ ಮೊಹರ್ ಮರಗಳು, ಮಹಾಗೊನಿ ಮಾರ್ಗದ ಇಕ್ಕೆಲಗಳಲಿ ಮಹಾಗೊನಿ ಮರಗಳು........ ಕಟ್ಟಡವಿಲ್ಲದೆಡೆಯೆಲ್ಲಾ ವನಸಿರಿ. ಗೂಗಲ್ ಅರ್ಥ್‌ನಲ್ಲಿ ಬೆಂಗಳೂರನ್ನ ನೋಡಿದರೆ ಕಾಂಕ್ರಿಟ್ ಕಾಡಿನ ಮಧ್ಯೆ ಹಸಿರು ತೇಪೆಯಂತೆ ಕಾಣುವ ಭಾರತೀಯ ವಿಜ್ಞಾನ ಮಂದಿರದಲ್ಲಿ ಬೇರೆ ತಂತ್ರಜ್ಞಾನ ಕಾಲೇಜುಗಳಂತೆ, ಬೈಕ್, ಸ್ಕೂಟರೆಟ್‌ಗಳ ಆರ್ಭಟವಿಲ್ಲ. (ಬಹಳಷ್ಟು ವಿದ್ಯಾರ್ಥಿಗಳು ಬಳಸೋದು ಸೈಕಲ್) ಶಬ್ದ - ವಾಯು ಮಾಲಿನ್ಯದಿಂದಲೂ ದೂರ, ಅನವಶ್ಯಕವಾಗಿ ಯಾವುದೂ ಬಳಸಲ್ಪಡಬಾರದು ಎಂಬ ಜೀವನ ಮೌಲ್ಯವನ್ನ ಕಲಿತ ವಿದ್ಯಾರ್ಥಿಗಳಿಗಿಂತ ಮೌಲ್ಯಯುತವಾದ ಆಸ್ತಿ ದೇಶವೊಂದಕ್ಕೆ ಬೇರೆ ಯಾವುದಾದರೂ ಇದೆಯೇ.