Wednesday, 2 November 2016

ಸ್ವಾನುಕಂಪದ ರೊಚ್ಚು!

ಕರ್ಣ ಕೃಷ್ಣರ ಸಂಭಾಷಣೆಯೊಂದು ಹೀಗಿದೆ.

ಕರ್ಣ ಮತ್ತು ಕೃಷ್ಣ 
ಚಿತ್ರಕೃಪೆ: ರಾಮಾನಂದ ಸಾಗರರ ಶ್ರೀಕೃಷ್ಣ ಧಾರವಾಹಿಯಿಂದ
 ಕರ್ಣ ಹೇಳುತ್ತಾನೆ.
"ನನಗೆ ಬಹಳ ಅನ್ಯಾಯವಾಗಿದೆ.
ನಾನು ಕಾನೀನನಾದದ್ದು  ನನ್ನ ತಪ್ಪೇ? 
(ಕಾನೀನ-ಮದುವೆಯಾಗದ ಕನ್ಯೆಗೆ ಹುಟ್ಟಿದವ)
ಹುಟ್ಟುತ್ತಲೇ ತಾಯಿ ತ್ಯಜಿಸಿದಳು.
ರಾಜಪರಿವಾರದಲ್ಲಿ ಬೆಳೆಯಬೇಕಾದವನು ಸೂತನ ಮನೆಯಲ್ಲಿ ಬೆಳೆದೆ.

ಸೂತಪುತ್ರನಾದ ಕಾರಣ ದ್ರೋಣರ ಬಳಿ ಪೂರ್ಣವಿದ್ಯೆ ದೊರೆಯಲಿಲ್ಲ.

ಪರಶುರಾಮರು ವಿದ್ಯೆಯೇನೋ ಕೊಟ್ಟರು. ಆದರೆ ಕೊನೆಯಲ್ಲಿ ನಾನು ಕ್ಷತ್ರಿಯನೆಂಬ ಕಾರಣಕ್ಕೆ ಕಲಿತ ವಿದ್ಯೆ ಸರಿಯಾದ ಸಮಯದಲ್ಲಿ ಮರೆತುಹೋಗಲಿ ಎಂದು ಶಾಪ ಕೊಟ್ಟುಬಿಟ್ಟರು. ಅದರಲ್ಲಿ ನನ್ನ ತಪ್ಪೇನು? ನಾನು ಕ್ಷತ್ರಿಯ ಎಂದು ನನಗೇ ಗೊತ್ತಿರಲಿಲ್ಲವಲ್ಲ.

ಅಲ್ಲೆಲ್ಲೋ ಹುಡುಗನೊಬ್ಬ ಓಡಿ ಬಂದು ನನ್ನ ರಥಕ್ಕೆ ಸಿಲುಕಿದ. ನನ್ನ ತಪ್ಪೇನೂ ಇಲ್ಲ. ಅದು ಅಪಘಾತವಷ್ಟೇ. ಆದರೆ ಅವರಪ್ಪ ನನಗೆ ಶಾಪಕೊಟ್ಟ.

ದ್ರೌಪದಿ ಸ್ವಯಂವರದಲ್ಲೂ ಸೂರ್ಯಪುತ್ರನಾದರೂ ನನಗೆ ಸೂತಪುತ್ರನೆಂಬ ಅಪಮಾನವಾಯಿತು. 

ಕುಂತಿಗೂ ಇತರ ಮಕ್ಕಳ ಬಗ್ಗೆಯೇ ಒಲವು.
ಅವರಿಗೆ ಸತ್ಯ ಹೇಳುವುದರ ಬದಲು ನನ್ನ ಬಳಿ ಬಂದು ವರ ಕೇಳಿದಳು.
ಆಯುಧಗಳ ಮರುಬಳಕೆಯನ್ನು ನಿಷೇಧಿಸಿಬಿಟ್ಟಳು.
ಎಂದೂ ತಾಯಿಯಂತೆ ನಡೆಯದವಳಿಗೂ ನಾನು ಕೇಳಿದ್ದು ಕೊಟ್ಟೆ.

ಕುರುಕುಲ ಸಿಂಹಾಸನವೇರಬೇಕಾದವನು ದುರ್ಯೋಧನನ ಔದಾರ್ಯದ ರಾಜ್ಯ ಆಳುತ್ತಿದ್ದೇನೆ.

ಭೀಷ್ಮರೆಂದಿಗೂ ನನ್ನನ್ನು ನನ್ನ ಯೋಗ್ಯತೆಗೆ ತಕ್ಕಂತೆ ನಡೆಸಿಕೊಳ್ಳಲಿಲ್ಲ.
ಯುದ್ದದ ಸಿದ್ದತೆಯಲ್ಲಿದಾಗಲೇ ನನಗೆ ಅಪಮಾನ ಮಾಡಿ ಅವರ ಸೇನಾಪತ್ಯದಲ್ಲಿ ಯುದ್ದ ಮಾಡಲು ಮನಸ್ಸಿಲ್ಲದಂತೆ ಮಾಡಿ ಹಿಂದೆ ಸರಿಸಿಬಿಟ್ಟರು. 
ದುರ್ಯೋಧನನ ಸ್ನೇಹಕ್ಕೆ ಇದೆಲ್ಲಾ ಸಹಿಸಿಕೊಂಡಿದ್ದೇನೆ. ಜೀವನ ಪೂರ್ತಿ ನನಗಾಗಿದ್ದು ಅನ್ಯಾಯ.

ಈಗ ದುರ್ಯೋಧನ ಕೆಟ್ಟವನು ಎಂದರೆ ಅದು ನಿಮಗಿರಬಹುದು. ನನಗಂತೂ ಅವನು ಎಂದಿಗೂ ಒಳ್ಳೆಯದೇ ಮಾಡಿದ್ದಾನೆ. ದೇವರು ನನ್ನ ಪಾಲಿಗಿಲ್ಲ. ಆದರೆ ದುರ್ಯೋಧನ ನನ್ನನೆಂದಿಗೂ ಕೈಬಿಟ್ಟಿಲ್ಲ. ನಾನು ಅವನ ಪರವಾಗಿರುವುದರಲ್ಲಿ ತಪ್ಪೇನಿದೆ?!".


ಕೃಷ್ಣ ಹೇಳುತ್ತಾನೆ.
"ಅಯ್ಯಾ ಕರ್ಣ, ನಾನು ಹುಟ್ಟಿದ್ದೂ ಸೆರೆಮನೆಯಲ್ಲಿ,
ಹುಟ್ಟುವ ಮೊದಲಿನಿಂದಲೂ ನನ್ನ ಸಾವು ಕಾದುಕುಳಿತಿತ್ತು.
ಹುಟ್ಟಿದ ರಾತ್ರಿಯೇ ತಾಯಿಯಿಂದ ನಾನೂ ಬೇರಾದೆ.

ನಿನಗಾದರೂ ಸೂತನ ಮನೆಯಲ್ಲಿದ್ದೂ ಶಿಕ್ಷಣ ದೊರೆಯಿತು. ಬಾಲ್ಯದಿಂದಲೇ ಖಡ್ಗಗಳ ಕಿಂಕಿಣಿ, ರಥಚಕ್ರಗಳ ಕಟಕಟ ಶಬ್ಧ, ಕುದುರೆಗಳ ಕೆನೆಯುವಿಕೆ, ಧನುಷ್ಠೇಂಕಾರ, ಬಾಣ ಮಸೆಯುವ ಸದ್ದು  ಇವುಗಳನ್ನು ಕೇಳಿಯೇ ಬೆಳೆದೆ. 
ನನಗೆ ಸಿಕ್ಕಿದ್ದು ಗೊಲ್ಲರ ಹಟ್ಟಿ. ಖಡ್ಗವೂ ಇಲ್ಲ, ರಥವೂ ಇಲ್ಲ. ಸಿಕ್ಕಿದ್ದು ಸಗಣಿ, ಗಂಜಲ, ಹಸುಕರುಗಳು, ಗೊಲ್ಲ ಹುಡುಗಿಯರು, ಬೆನ್ನತ್ತಿ ಬರುತ್ತಿದ್ದ ಕಂಸನ ಕೊಲೆ ಪ್ರಯತ್ನಗಳು. ಸೈನ್ಯವೂ ಕಾಣೆ. ಶಿಕ್ಷಣವೂ ಇಲ್ಲ. 

ಹದಿವಯಸ್ಸಿನಲ್ಲೇ ಮಾವನನ್ನೇ ಕೊಂದ ಕೊಲೆಗಾರ ಎನಿಸಿಕೊಂಡೆ.
ಜರಾಸಂಧನ ಆಕ್ರಮಣಕ್ಕೆ ಹೆದರಿ ಫಲವತ್ತಾದ ಯಮುನಾ ತೀರ ಬಿಟ್ಟು ಊರು ಬಿಟ್ಟು ಕಂಡರಿಯದ ಸಮುದ್ರತೀರ ತಲುಪಬೇಕಾಯ್ತು. ಎಲ್ಲದಕ್ಕೂ ನಾನೇ ಕಾರಣ ಎಂದು ಊರಿನವರೆಲ್ಲಾ ಗೊಣಗಿಕೊಂಡದ್ದೂ ನನಗೆ ಗೊತ್ತು. ರಣಹೇಡಿಯೆಂಬ ಅಪವಾದವೂ ನನ್ನ ಮೇಲೆ. 

ನೀವೆಲ್ಲಾ ನಿಮ್ಮ ಗುರುಗಳಿಂದ ಸ್ನಾತಕರೆಂದು ಗುರುತಿಸಿಕೊಳ್ಳುವಾಗ ನಾನಿನ್ನೂ ಗುರುಕುಲಕ್ಕೂ ಸೇರಿರಲಿಲ್ಲ. ನಾನು ಸಾಂದೀಪನಿಗಳ ಗುರುಕುಲ ಸೇರಿದ್ದೇ ಹದಿನೆಂಟನೇ ವಯಸ್ಸಿಗೆ.

ನಿನಗೆ ರಾಜ್ಯವಾದರೂ ಇದೆ. 
ರಾಜ ನೀನು. 
ನಾನೇನು? ಯಾವೂರ ಸಿಂಹಾಸನಾಧೀಶ? 

ರುಕ್ಮಿಣಿ, ಮಿತ್ರವಿಂದೆ, ಹೀಗೇ ಪರಿಚಯವೇ ಇಲ್ಲದ ಹುಡುಗಿಯರು ನನ್ನನ್ನು ರಕ್ಷಿಸು, ನೀನೇ ಮದುವೆಯಾಗು ಎಂದರೆ ಮಾಡುವ ಕೆಲಸ ಬಿಟ್ಟು ಅಲ್ಲಿಗೆ ಓಡಬೇಕಾಯ್ತು. 
ಎಲ್ಲವೂ ಅಯೋಜಿತ.
ನಾನು ಪ್ರೇಮಿಸಿದವಳು ದಕ್ಕಲಿಲ್ಲ. ಅದರೆ ನಾನು ಮಾತ್ರ ಬಯಸಿದವರಿಗೆಲ್ಲಾ ಸಿಕ್ಕೆ. 

ಅಪಹೃತನಾಗಿದ್ದ ಗುರು ಸಾಂದೀಪನಿಯ ಮಗನನ್ನು ಹುಡುಕಿ ತಂದೆ. 
ಆದರೆ ನನ್ನದೇ ಮಗ ಪ್ರದ್ಯುಮ್ನ ಅಪಹರಣಕ್ಕೊಳಗಾದಾಗ ನನಗೇನೂ ಮಾಡಲಾಗಲಿಲ್ಲ.  
ಮೊಮ್ಮಗ ಅನಿರುದ್ಧನನ್ನು ಚಿತ್ರಲೇಖೆ ನಮ್ಮ ಮೂಗಿನಡಿಯಲ್ಲೇ ಅಪಹರಿಸಿದಾಗ ಗೊತ್ತಾಗಲೇ ಇಲ್ಲ. 

ಈಗ ದುರ್ಯೋಧನ ಗೆದ್ದರೆ ಅದರ ಸಂಭ್ರಮಕ್ಕೆ ನಿನಗಿನ್ನೂ ದೊಡ್ಡ ರಾಜ್ಯ ಕೊಡಬಹುದು. 
ನಿನ್ನ ಕೀರ್ತಿ ಇನ್ನೂ ಉತ್ತಂಗಕ್ಕೇರಬಹುದು. 

ನಾನು ಕೇವಲ ಸಾರಥಿ, 
ಯುದ್ದದಲ್ಲಿ ಶಸ್ತ್ರ ಎತ್ತುವವನಲ್ಲ. ಕೀರ್ತಿಯೂ ಇಲ್ಲ, ಮತ್ತೊಂದೂ ಇಲ್ಲ. 
ಧರ್ಮರಾಜನ ಗೆಲುವಲ್ಲಿ ನನಗ್ಯಾವ ಲಾಭವಿದೆ ಹೇಳು. 
ಈಗಾಗಲೇ ಇದೆಲ್ಲಾ ಯುದ್ದಕ್ಕೂ ರಾದ್ಧಾಂತಕ್ಕೂ ನಾನೇ ಕಾರಣ ಎಂಬ ಅಪವಾದ ನನ್ನ ತಲೆ ಮೇಲಿದೆ. 
ಧರ್ಮಜ ಗೆದ್ದರೂ ಸೋತರೂ ಇದು ಹೋಗದು. 

ಆದರೆ ಒಂದು ಮಾತು ನೆನಪಿನಲ್ಲಿಡು ಕರ್ಣ.
ಎಲ್ಲರಿಗೂ ಜೀವನ ಸವಾಲೆಸೆಯುತ್ತದೆ.
ಅನ್ಯಾಯ ಮಾಡುತ್ತದೆ. Life is not fair on anybody. 
ದುರ್ಯೋಧನನ ಬಾಳಿನಲ್ಲಿ ಅನ್ಯಾಯಗಳು ಸಾಲು ಸಾಲು ಜರುಗಿವೆ. 
ಯುದಿಷ್ಠಿರನ ಬಾಳಿನಲ್ಲೂ ಸಹ.

ಆದರೆ ಧರ್ಮ ಯಾವುದೆಂದು ನಿನ್ನ ಮನಸ್ಸಿಗೆ ಗೊತ್ತಿರುತ್ತೆ. ವಿವೇಚನೆ ಹೇಳುತ್ತೆ. 
ನಾವೇನೇನು ಎದುರಿಸಿದಿವಿ. ಎಷ್ಟು ಅಪಮಾನಗಳನ್ನ ಸಹಿಸಿದಿವಿ. 
ಎಷ್ಟು ಅನ್ಯಾಯಗಳು ನಮ್ಮ ಮೇಲಾಯ್ತು ಎಂಬುದಲ್ಲ ಮುಖ್ಯ. 
ಆ ಸಮಯದಲ್ಲಿ ನಾವೇನು ಮಾಡಿದೆವು ಎಂಬುದಷ್ಟೇ ನಮ್ಮ ವ್ಯಕ್ತಿತ್ವದ ಅಳತೆಗೋಲು. 
ಗೋಳಾಡುವುದನ್ನು ನಿಲ್ಲಿಸು. 
ಸ್ವಾನುಕಂಪದ ರೊಚ್ಚಿನಲ್ಲಿ ಮಾಡಿದ್ದೆಲ್ಲವನ್ನೂ, ಮಾಡುವುದೆಲ್ಲವನ್ನೂ ಸಮರ್ಥಿಸಿಕೊಳ್ಳಬೇಡ . 
ವಿವೇಕ ತೋರಿದ ದಾರಿಯಲ್ಲಿ ನಡೆವುದನ್ನ ಕಲಿ. 

ಜೀವನದಲ್ಲಿ ಅನ್ಯಾಯವಾಗಿದೆಯೆಂಬುದು ಧರ್ಮದ ಹಾದಿ ಬಿಟ್ಟು ನಡೆವುದಕ್ಕೆ ಸಿಕ್ಕ ಅನುಮತಿಯೆನ್ನಬೇಡ."


(ಇದು ವ್ಯಾಸ ಭಾರತದಲ್ಲಿ ಕಂಡಿಲ್ಲ. ನೆನಪಿನಾಳದಿಂದ ತೆಗೆದದ್ದು, ಯಾರೋ ಬರೆದಿದ್ದ, ಎಂದೋ ಓದಿದ್ದ ಸಂಭಾಷಣೆಯ ಮರುಸೃಷ್ಠಿ. ಮೂಲ ಬರಹಕ್ಕಿಂತ ಭಿನ್ನವಾಗಿರಬಹುದು. ಮೂಲ ಬರಹ ಬರೆದವರಿಗೆ ನನ್ನ ನಮನಗಳು. ಈ ಕೃಷ್ಣನ ನುಡಿಗಳು ನಮ್ಮ ದಾರಿದೀಪವಾಗಲಿ.)

2 comments:

  1. ಕೃಷ್ಣನಿಗಿಂತ ಕರ್ಣನ ಪಾತ್ರ ತುಂಬಾ ಇಷ್ಟ ನಂಗೆ

    ReplyDelete
    Replies
    1. ನಮ್ಮ ಧಾರಾವಾಹಿಗಳ ನಿರ್ಮಾತೃಗಳು, ಎಮೋಷನಲ್ ಮಸಾಲೆ ಬೆರೆಸಲು ಅವಕಾಶ ಒದಗಿಸಿದ, ನಮ್ಮ ಹಳೆಯ ಕವಿಗಳಿಂದ ಹಿಡಿದು ಹೊಸ ಪೀಳಿಗೆಯ ಬಂಡಾಯಗಾರರವರೆಗೂ, ಎಲ್ಲರಿಗೂ ನೆಗೆಟಿವ್ ಪಾತ್ರಗಳನ್ನು (ತಮ್ಮ ನೆಗೆಟಿವಿಟಿಯನ್ನ ಸಮರ್ಥಿಸಿಕೊಳ್ಳಲೂ ಇರಬಹುದು) ಧನಾತ್ಮಕವಾಗಿ ಕಾಣುವ, ತೋರಿಸುವ ಚಾಳಿಯ ಕಾರಣಕ್ಕೆ ಕರ್ಣ ಹೀರೋ ಆಗಿಬಿಟ್ಟ. ಜನರಿಗೆ ಇಷ್ಟವಾಗಿಬಿಟ್ಟ.... ವ್ಯಾಸರು ಬರೆದ ಮೂಲ ಮಹಾಭಾರತವಾದ ಕರ್ಣನಲ್ಲಿ ಇಷ್ಟಪಡುವಂತಹುದೇನೂ ನಾ ಕಾಣಲಿಲ್ಲ.

      Delete