Thursday 11 April 2013

ಪಂಥ (ಸ್ವಗತ ನಾಟಕ)

ಕಾನ್ಸ್‌ಟನ್ಸ್ ಕ್ಲಾರಾ ಗಾರ್ನೆಟ್
ಚಿತ್ರಕೃಪೆ: www.ebookmall.com

ಆಂಟನ್ ಪಾವಲೋವಿಚ್ ಚೆಕಾಫ಼್
ಚಿತ್ರಕೃಪೆ http://chehov.niv.ru/


ಪಾತ್ರವರ್ಗ: ಸಾಹುಕಾರ, ವಕೀಲ
 ಅವಧಿ: ೨೦ ನಿಮಿಷಗಳು

ದೃಶ್ಯ - ೧
(ಸಾಹುಕಾರ ತನ್ನ ಹಳೆಯ ನೆನಪುಗಳೊಡನೆ ತನ್ನ ಅಧ್ಯಯನ ಕೊಠಡಿಯಲ್ಲಿ ಶತಪಥ ತಿರುಗುತ್ತಿದ್ದಾನೆ) 

ತನ್ನ ಅಧ್ಯಯನ ಕೊಠಡಿಯಲ್ಲಿ ಹಳೆಯ ಘಟನಾವಳಿಗಳನ್ನು
ನೆನಪಿಸಿಕೊಳ್ಳುತ್ತಿರುವ ಸಾಹುಕಾರ

ಚಿತ್ರಕೃಪೆ: http://bettysenglish2.blogspot.in
ಸಾಹುಕಾರ: (ಸ್ವಗತ) ೧೫ ವರ್ಷ ಹಿಂದೆ, ಅದೂ ಹೀಗೇ, ಒಂದು ಚಳಿಗಾಲದ ಸಂಜೆ. ಹೇಗೆ ಮರೆಯಲಿ ಆ ಸಂಜೆ. ಆ ದಿನ ಬಹಳಷ್ಟು ಗಣ್ಯ ವ್ಯಕ್ತಿಗಳು ನನ್ನ ಭೋಜನಕೂಟದ ಅತಿಥಿಗಳಾಗಿದ್ದರು ಮರಣದಂಡನೆ ಕೂಡ ಚರ್ಚೆಯ ಭಾಗವಾಗಿತ್ತು. ಬಹಳಷ್ಟು ಅತಿಥಿಗಳು ಅದನ್ನು ವಿರೋಧಿಸಿದ್ದರು. ಮರಣದಂಡನೆಯಂಥಾ ಕ್ರೂರ ಶಿಕ್ಷೆ ಈಗಿನ ದಿನಮಾನಕ್ಕೆ ತಕ್ಕುದಲ್ಲ. ಮರಣದಂಡನೆಯನ್ನ ತೆಗೆದು ಜೀವಾವಧಿ ಸೆರೆವಾಸದ ಶಿಕ್ಷೆಯನ್ನ ಯಾವುದೇ ಅಪರಾಧಕ್ಕೆ ನೀಡುವ ಗರಿಷ್ಠ ಪ್ರಮಾಣದ ಶಿಕ್ಷೆಯಾಗಿಸಬೇಕು ಎಂದು ವಾದಿಸಿದರು. ಆದರೆ ನಾನವರ ವಾದ ಒಪ್ಪಲಿಲ್ಲ. ನನ್ನ ಪ್ರಕಾರ ಜೀವಾವಧಿ ಶಿಕ್ಷೆ ಮರಣದಂಡನೆಗಿಂತ ಹೆಚ್ಚು ಕ್ರೂರ. ಮರಣದಂಡನೆ ಮನುಷ್ಯನನ್ನು ಒಮ್ಮೆಗೇ ಕೊಂದರೆ ಜೀವಾವಧಿ ಶಿಕ್ಷೆ ನಿಧಾನವಾಗಿ ಕೊಲ್ಲುತ್ತದೆ.

ನನ್ನ ಅತಿಥಿಯೊಬ್ಬರು ಹೇಳಿದರು, ಎರಡೂ ಅಮಾನವೀಯವೇ, ಏಕೆಂದರೆ ಎರಡರ ಉದ್ದೇಶವೂ ಒಂದೇ. ಒಂದು ಬೇಗ ಕೊಂದರೆ ಇನ್ನೊಂದು ನಿಧಾನವಾಗಿ ಕೊಲ್ಲುತ್ತದೆ, ಕಾನೂನು ದೇವರಲ್ಲ. ಜೀವವನ್ನು ಮರಳಿಸುವ ಶಕ್ತಿ ಕಾನೂನಿಗಿಲ್ಲದ ಮೇಲೆ, ಜೀವ ತೆಗೆಯುವ ಅಧಿಕಾರವೂ ಅದಕ್ಕಿರಬಾರದು.

ನನ್ನ ಭೋಜನಕೂಟಕ್ಕೆ ವಕೀಲನೊಬ್ಬ ಬಂದಿದ್ದ. ಇನ್ನೂ ೨೫ ವರ್ಷದ ಯುವಕ. ಆತ ಎರಡೂ ಅಮಾನವೀಯವೇ. ಆದರೂ ಮರಣದಂಡನೆ ಮತ್ತು ಜೀವಾವಧಿ ಎರಡರಲ್ಲಿ ನನ್ನ ಮತ ಜೀವಾವಧಿ ಶಿಕ್ಷೆಗೇ, ಹೇಗಾದರೂ ಬದುಕುವುದು ಸಾಯುವುದಕ್ಕಿಂತ ಮೇಲು ಎಂದ.

ಭೋಜನಕೂಟದಲ್ಲಿ ಸಾಹುಕಾರ ಮತ್ತು ಯುವ ವಕೀಲನ ವಾಗ್ವಾದ
ಚಿತ್ರಕೃಪೆ: http://bettysenglish2.blogspot.in

ನನಗೋ ಯೌವನದ ಬಿಸಿ, ಹಣದ ಮದ, ಆ ಯುವಕನಿಗೆ ಏನೇನೋ ಹರಟಬೇಡ, ನಾನು ಬೇಕಾದರೆ ಇಪ್ಪತ್ತು ಲಕ್ಷ ಪಣಕ್ಕಿಡುತ್ತೇನೆ, ನೀನು ಐದು ವರ್ಷ ಸಹ ಸೆರೆಯಲ್ಲಿರಲಾರೆ ಎಂದೆ.

ಅವನೂ ಸಹ ನೀನು ಗಂಭೀರವಾಗಿ ಈ ಪಂಥಾಹ್ವಾನ ನೀಡುತ್ತಿರುವುದಾದರೆ, ನಾನೂ ಸ್ವೀಕರಿಸುವೆ, ಅಷ್ಟೇ ಅಲ್ಲ, ಐದರ ಬದಲು ಹದಿನೈದು ವರ್ಷ ಸೆರೆಯಲ್ಲಿರುವೆ ಎನ್ನುವುದೇ?

ನನಗೂ ರೇಗಿಹೋಯಿತುಹದಿನೈದು! ಸರಿ! ಹಾಗಿದ್ದರೆ ನಾನು ಇಪ್ಪತ್ತು ಲಕ್ಷ ಪಣಕ್ಕಿಟ್ಟೆ ಎಂದುಬಿಟ್ಟೆ.

ಆತ ಸರಿ! ನಿನ್ನ ಇಪ್ಪತ್ತು ಲಕ್ಷ ಪಣಕ್ಕೆ ನಾನು ನನ್ನ ಸ್ವಾತಂತ್ರ್ಯವನ್ನ ಪಣಕ್ಕಿಟ್ಟೆ ಎಂದ.

ಹೀಗೇ ಆ ತರ್ಕವಿಲ್ಲದ, ಕ್ರೂರ ಪಂಥಕ್ಕೆ ನಾಂದಿಯಾಯಿತು.

ಅಂದು ರಾತ್ರಿ ಊಟದ ಸಮಯದಲ್ಲಿ ನಾನು ಆ ಯುವಕನಿಗೆ ಮೃದುವಾಗಿಯೇ ಹೇಳಿದೆ, ಯೋಚಿಸಿ ನೋಡು, ನಿನಗಿನ್ನೂ ಸಮಯವಿದೆ. ನನಗೆ ಇಪ್ಪತ್ತು ಲಕ್ಷ ಏನೇನೂ ಅಲ್ಲ, ಆದರೆ ನೀನು ನಿನ್ನ ಜೀವನದ ಮಹತ್ವದ ಮೂರ್ನಾಲ್ಕು ವರ್ಷ ಕಳೆದುಕೊಳ್ಳುತ್ತಿಯೇ.  ಮೂರೋ ನಾಲ್ಕೋ ಏಕೆಂದರೆ, ನೀನು ಅದಕ್ಕಿಂತ ಹೆಚ್ಚು ಸೆರೆಯಲ್ಲಿರಲಾರೆ, ಹತಭಾಗ್ಯ ಹುಡುಗನೇ, ನಿನ್ನ ಬಗ್ಗೆ ನನಗೆ ಅನುಕಂಪವಿದೆ. ಸ್ವೇಚ್ಚೆಯ ಬಂಧನ, ಶಿಕ್ಷೆಯಾಗಿ ಬರುವ ಕಡ್ಡಾಯ ಬಂಧನದಲ್ಲಿರುವುದಕ್ಕಿಂತ ಕಠಿಣ, ಯಾವಾಗ ಬೇಕಾದರೂ ಸ್ವತಂತ್ರವಾಗುವ ನಿನ್ನ ಹಕ್ಕು, ನಿನ್ನ ಬಂಧನವನ್ನು ನರಕಗೊಳಿಸುತ್ತದೆ.”

(ಸ್ವಲ್ಪ ಮೌನಆಮೇಲೊಂದು ನಿಟ್ಟುಸಿರು) 
ಅಷ್ಟಕ್ಕೂ ಅಂದಿನ ಪಂಥದ ವಿಷಯವೇನು? ಅವನು ತನ್ನ ಬದುಕಿನ ೧೫ ವರ್ಷ ಕಳೆದುಕೊಳ್ಳುವ ಮತ್ತು ನಾನದಕ್ಕೆ ಇಪ್ಪತ್ತು ಲಕ್ಷ ಬಿಸಾಡುವುದರಿಂದ ಸಾಧಿಸುವುದಾದರೂ ಏನು? ಈ ಪಂಥ ನಿಜಕ್ಕೂ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆಗಳಲ್ಲಿ ಯಾವುದು ಮೇಲು, ಉತ್ತಮ, ಮಾನವೀಯ ಎಂದು ನಿರ್ಧರಿಸುತ್ತದೆಯೇ?

(ಕ್ಷಣ ಕಾಲ ಮೌನ) ಇಲ್ಲ, ಇಲ್ಲ! ಇದು ಅರ್ಥಹೀನ. ನನ್ನ ಅಹಂಕಾರ ಮತ್ತು ಹಣದ ಗರ್ವದಿಂದ ಮತ್ತು ಅವನ ಹಣದಾಹದಿಂದ ಈ ಪಂಥ ಜಾರಿಗೆ ಬಂತಷ್ಟೇ.

ಆ ಸಂಜೆಯೇ ಪಂಥದ ಕರಾರು ಪತ್ರವೂ ಸಿದ್ದವಾಯಿತು.
(ಮೇಜಿನ ಸೆಳೆಮನೆಯಿಂದ ಕರಾರುಪತ್ರ ಕೈಗೆತ್ತಿಗೊಂಡು ವ್ಯಂಗ್ಯ ನಗೆ ನಕ್ಕು ಓದತೊಡಗುತ್ತಾನೆ)
  1. ಯುವ ವಕೀಲ ತನ್ನ ಹದಿನೈದು ವರ್ಷಗಳನ್ನು ಸಾಹುಕಾರನ ವಸತಿಗೃಹವೊಂದರಲ್ಲಿ ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ  ಕಳೆಯತಕ್ಕದ್ದು.
  2. ಹದಿನೈದು ವರ್ಷ ಬಂಧಿಗೆ ವಸತಿ ಗೃಹದ ಹೊಸ್ತಿಲು ದಾಟುವ, ಮಾನವ ಧ್ವನಿ ಕೇಳುವ, ಮನುಷ್ಯರನ್ನು ನೋಡುವ, ಪತ್ರವನ್ನಾಗಲಿ, ಪತ್ರಿಕೆಯನ್ನಾಗಲಿ ಸ್ವೀಕರಿಸುವ ಸ್ವಾತಂತ್ರ್ಯವಿಲ್ಲ.
  3. ಬಂಧಿ ಒಂದು ಸಂಗೀತ ಉಪಕರಣ ಹಾಗೂ ಪುಸ್ತಕಗಳನ್ನು ಹೊಂದಲು, ಪತ್ರಗಳನ್ನು ಬರೆಯಲು, ದ್ರಾಕ್ಷಾರಸ ಸೇವಿಸಲು, ಮತ್ತು ಚುರುಟು ಸೇದಲು ಅನುಮತಿಸಲ್ಪಡುವನು. ಆದರೆ ಅವುಗಳನ್ನು ವಸತಿಗೃಹದಲ್ಲಿ ಅದೇ ಉದ್ದೇಶಕ್ಕಾಗಿ ನಿರ್ಮಿಸಲಾದ ಒಂದು ಕಿಟಕಿಯ ಮೂಲಕ ಬೇಡಿಕೆ ಪತ್ರವನ್ನಿಟ್ಟು, ಆ ಕಿಟಕಿಯ ಮೂಲಕವೇ ಪಡೆಯತಕ್ಕದ್ದು. ಅವುಗಳನ್ನು ಎಷ್ಟು ಬೇಕಾದರೂ ಒದಗಿಸಲು ಸಾಹುಕಾರ ಬದ್ದನಾಗಿರುತ್ತಾನೆ.
  4. ಬಂಧನದ ಅವಧಿ ನವೆಂಬರ್ ೧೪ ೧೮೭೦ರ ಮಧ್ಯಾಹ್ನ ೧೨ಗಂಟೆಯಿಂದ, ನವೆಂಬರ್ ೧೪ ೧೮೮೫ರ ಮಧ್ಯಾಹ್ನ ೧೨ಗಂಟೆಯವರೆಗೆ ನಿಖರ ಹದಿನೈದು ವರ್ಷದ್ದಾಗಿರುತ್ತದೆ.
  5. ಬಂಧನದ ಅವಧಿ ಮುಗಿಯುವ ನಿಮಿಷದಷ್ಟು ಮುಂಚೆ ಸಹ ಬಂಧಿ ಹೊರಹೋಗಲು ಕೇಳಿದರೂ, ಅಥವಾ ಬಂಧನದಿಂದ ವಿಮುಕ್ತನಾಗಲು ಸಣ್ಣ ಪ್ರಯತ್ನ ನಡೆಸಿದರೂ ಸಹ ಈ ಕರಾರು ಪತ್ರ ಸಾಹುಕಾರನನ್ನು ಇಪ್ಪತ್ತು ಲಕ್ಷ ಕೊಡಬೇಕಾದ ಭಾಧ್ಯತೆಯಿಂದ ವಿಮೋಚಿಸುವುದು.
ಅಂತೂ ದುರಾಸೆಯವನ ಸ್ವಾತಂತ್ರ್ಯಹರಣಕ್ಕೆ ಬೇಕಾದ ಇಲ್ಲಾ ಅಂಶಗಳನ್ನೂ ಒಪ್ಪಂದ ಒಳಗೊಂಡಿತ್ತು.


ಬಂಧನ ಅವಧಿಯ ಪ್ರಾರಂಭದಲ್ಲಿ ಬಂಧಿಯ ಏಕಾಂತ ಬದುಕು 
ಚಿತ್ರಕೃಪೆ: http://bettysenglish2.blogspot.in
ತನ್ನ ಮೊದಲ ವರ್ಷ ಅವನು ಕೇವಲ ಕಥೆ ಕಾದಂಬರಿ ಓದಿದ. ಖಿನ್ನತೆ ಏಕಾಕಿತನದಿಂದ ಬಳಲಿದ. ದ್ರಾಕ್ಷಾರಸ, ಚುರುಟು ಮುಟ್ಟಲಿಲ್ಲ. ರಾತ್ರಿ ಹಗಲು ಎನ್ನದೇ ಅವನ ಪಿಯಾನೋ ಸದ್ದು ಮಾಡುತ್ತಿತ್ತು. ಆದರೆ ಅವನು ದ್ರಾಕ್ಷಾರಸ, ಮತ್ತು ಚುರುಟಿಗೆ ಬೇಡಿಕೆ ಸಲ್ಲಿಸಲಿಲ್ಲ  ನನಗೆ ಬರೆದ ಪತ್ರದಲ್ಲಿ ಮದ್ಯದ ಅಮಲು ಕಾಮನೆಗಳನ್ನು ಪ್ರಚೋದಿಸುತ್ತದೆ. ಕಾಮನೆಗಳು ಬಂಧಿತನ ಅತಿದೊಡ್ಡ ಶತ್ರು. ದ್ರಾಕ್ಷಾರಸ ಕುಡಿದು ಏಕಾಂತ ಅನುಭವಿಸುವುದಕ್ಕಿಂತ ಘೋರ ಶಿಕ್ಷೆ ಬೇರಿಲ್ಲ. ಚುರುಟಿನ ಹೊಗೆ ಕಟ್ಟಡದ, ಕೋಣೆಯ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ ನನಗೆ ಅವರೆಡರ ಸಂಗವೂ ಬೇಡ. ಎಂದು ಬರೆದಿದ್ದ. ಎರಡನೇ ವರ್ಷ ಪಿಯಾನೋ ನಿಶಬ್ದವಾಯಿತು, ಬಂಧಿ ಅಭಿಜಾತ ಕೃತಿಗಳಿಗೆ ಬೇಡಿಕೆ ಸಲ್ಲಿಸಿದ. ಐದನೇ ವರ್ಷದ ಹೊತ್ತಿಗೆ ದ್ರಾಕ್ಷಾರಸ ಕೇಳಿದ. ಅವನಿಗೆ ಕೊಟ್ಟಿದ್ದ ಪಿಯಾನೋ ಸದ್ದು ಮಾಡತೊಡಗಿತು. ಅವನನ್ನು ಕಿಟಕಿಯಿಂದ ಗಮನಿಸುತ್ತಿದ್ದ ನನ್ನ ಕಡೆಯವರು ಅವನು ತನ್ನಷ್ಟಕ್ಕೆ ತಾನೇ ಮಾತಾಡುವುದು, ಅಳುವುದು, ಅರಚುವುದು, ರಾತ್ರಿಯೆಲ್ಲಾ ಏನೇನೋ ಬರೆದು ಬೆಳಿಗ್ಗೆ ಹರಿಯುವುದು ಮಾಡುತ್ತಿದ್ದ ಎಂದು ವರದಿ ತಂದರು. ನಾನಂತೂ ಅವನಿಗೆ ಹುಚ್ಚು ಹಿಡಿಯುತ್ತಿದ್ದೆ ಎಂದುಕೊಂಡಿದ್ದೆ. 

ತನ್ನ ಬಂಧನದ ಆರನೇ ವರ್ಷದಲ್ಲಿ ಬಂಧಿ ಭಾಷೆಗಳನ್ನು ಕಲಿಯತೊಡಗಿದ. ತತ್ವಜ್ಞಾನ, ಮತ್ತು ಇತಿಹಾಸವನ್ನು ಅಭ್ಯಸಿಸತೊಡಗಿದ. ನಾಲ್ಕು ವರ್ಷಗಳಲ್ಲಿ ಸುಮಾರು ಆರುನೂರು ಸಂಪುಟಗಳನ್ನು ಅವನು ಅಧ್ಯಯನ ಮಾಡಿದ್ದ. ನನಗಂತೂ ಅವನು ಕೇಳಿದ ಪುಸ್ತಕಗಳನ್ನು ಒದಗಿಸುವುದರಲ್ಲಿ ಸಾಕು ಸಾಕಾಗಿ ಹೋಯಿತು. ಆ ಸಮಯದಲ್ಲೇ ಅವನಿಂದ ನನಗೊಂದು ಪತ್ರ ಬಂದಿತು.  

ಅದರಲ್ಲಿ ಬರೆದಿದ್ದ... 
ಪ್ರಿಯ ಬಂಧಕ - ನಾನು ಈ ಪತ್ರವನ್ನು ಆರು ಭಾಷೆಗಳಲ್ಲಿ ಬರೆಯುತ್ತಿದ್ದೇನೆ. ಈ ಭಾಷೆಗಳನ್ನು ಬಲ್ಲವರಿಗೆ ತೋರಿಸು, ಅವರು ಇದನ್ನು ಓದಿ ಇದರಲ್ಲಿರುವ ತಪ್ಪುಗಳನ್ನು ಕಂಡುಹಿಡಿಯಲಿ. ನಂತರ ಒಂದು ತಪ್ಪಿಗೆ ಒಂದರಂತೆ ಹೊರಗಿನ ತೋಟದಲ್ಲಿ ಗುಂಡು ಹಾರಿಸಲು ವಿನಂತಿಸುವೆ

ಮಾನವ ಕುಲ ವಿವಿಧ ಜನಾಂಗ, ವರ್ಣ, ಧರ್ಮ, ದೇಶ, ಭಾಷೆಗಳಿಗೆ ಸೇರಿದರೂ, ಎಲ್ಲರ ಹೃದಯದಲ್ಲಿ ಉರಿಯುತ್ತಿರುವ ಆತ್ಮಜ್ಯೋತಿ ಒಂದೇ. ಜ್ಞಾನಿಗಳು ಯಾವುದನ್ನು ಬ್ರಹ್ಮಾನಂದವೆಂದು ಕರೆಯುವರೋ ಅದನ್ನು ನಾನೀಗ ಅನುಭವಿಸುತ್ತಿದ್ದೇನೆ.

ನಾನು ಅವನ ಆಸೆ ತೀರಿಸಲು ತೋಟದಲ್ಲಿ ಎರಡು ಗುಂಡುಗಳನ್ನಷ್ಟೇ ಹೊಡೆಯಬೇಕಾಯಿತು. ಹತ್ತು ವರ್ಷದ ಮೇಲೆ ಅವನು ಧರ್ಮಭೋಧೆಯನ್ನು ಓದತೊಡಗಿದ. ಸುಮಾರು ಒಂದು ವರ್ಷ ಅವನು ಆ ಚಿಕ್ಕ ಪುಸ್ತಕದ  ಮೇಲೇ ಕಳೆದ. ನಾಲ್ಕು ವರ್ಷಗಳಲ್ಲಿ ಆರುನೂರು ಸಂಪುಟಗಳ ಅಧ್ಯಯನ ನಡೆಸಿದವನು ಒಂದು ವರ್ಷವನ್ನು ಆ ಸಣ್ಣ ಪುಸ್ತಕದ ಮೇಲೆ ಏಕೆ ಕಳೆದನೋ ನನಗಂತೂ ಅರ್ಥವಾಗಲಿಲ್ಲ.

ಕೊನೆಯ ಎರಡು ವರ್ಷಗಳಲ್ಲಿ ಅವನ ಪುಸ್ತಕ ಬೇಡಿಕೆಯ ವೈವಿಧ್ಯತೆಗೆ ಮಿತಿಯೇ ಇರಲಿಲ್ಲ. ವೈದ್ಯಕೀಯ, ರಸಾಯನಶಾಸ್ತ್ರ, ಇತಿಹಾಸ, ತತ್ವಶಾಸ್ತ್ರಗಳನ್ನು ಅಭ್ಯಸಿಸಿದ. ಬೈರಾನ್ ಮತ್ತು ಶೇಕ್ಸ್‌ಪಿಯರ್, ಸಾಹಿತ್ಯ ಕೃತಿಗಳಿಗೆ ಒಮ್ಮೆ ಬೇಡಿಕೆ ಸಲ್ಲಿಸಿದರೆ ಮತ್ತೊಮ್ಮೆ ವಿಜ್ಞಾನ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದ. ಒಮ್ಮೆಯಂತೂ ಅವನು ಒಂದೇ ಬೇಡಿಕೆ ಪತ್ರದಲ್ಲಿ, ರಸಾಯನಶಾಸ್ತ್ರ, ವೈದ್ಯಶಾಸ್ತ್ರ, ಕಾದಂಬರಿಗಳು, ತತ್ವಶಾಸ್ತ್ರಗಳ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದ. ಅವನ ಓದು ಹೇಗಿತ್ತೆಂದರೆ ಒಡೆದ ನಾವೆಯ ನಾವಿಕನೊಬ್ಬ, ನಾವೆಯ ಒಡೆದ ತೇಲುವ ಚೂರುಗಳ ನಡುವೆಯೇ ತನ್ನ ಜೀವ ರಕ್ಷಣೆಗಾಗಿ ಇತ್ತಿಂದತ್ತ, ಅತ್ತಿಂದಿತ್ತ ಈಜುವಂತೆ ಇತ್ತು.

(ನಿಟ್ಟುಸಿರಿಡುತ್ತಾ) ನಾಳೆ ಮಧ್ಯಾಹ್ನ ೧೨ಗಂಟೆಗೆ ಅವನು ತನ್ನ ಸ್ವಾತಂತ್ರ್ಯವನ್ನು ಮರಳಿ ಪಡೆಯುತ್ತಾನೆ. ಕರಾರಿನಂತೆ ನಾನವನಿಗೆ ಇಪ್ಪತ್ತು ಲಕ್ಷ ಕೊಡಬೇಕು... ಕೊಟ್ಟ ಮೇಲೆ ನನ್ನ ಕಥೆ ಮುಗಿಯಿತು.

ಹದಿನೈದು ವರ್ಷಗಳ ಹಿಂದೆ ಇಪ್ಪತ್ತು ಲಕ್ಷ ನನಗೆ ಕ್ಷುಲ್ಲಕ. ಆದರೆ ನಾನೀಗ ಪ್ರತಿ ಸಣ್ಣಪುಟ್ಟ ವ್ಯಾವಾಹಾರಿಕ ಏರಿಳಿತಗಳಿಗೆ ಕಂಪಿಸುವ, ಸಾಕಷ್ಟು ಸಂಪತ್ತನ್ನು ಷೇರುಪೇಟೆಯಲ್ಲಿ ಕಳೆದರೂ ಹಾಗೆಂದು ತೋರಿಸಿಕೊಳ್ಳದ ಸಾಹುಕಾರ. ಈಗ ನಾನು ನನ್ನ ಬಂಡವಾಳ ಹೆಚ್ಚೋ, ಸಂಪಾದನೆ ಹೆಚ್ಚೋ, ನಾನು ನೀಡಬೇಕಿರುವ ಸಾಲ ಹೆಚ್ಚೋ, ನನಗೆ ಮರಳಿ ಬರಬೇಕಾದ ಸಾಲ ಹೆಚ್ಚೋ, ನನಗೆ ಲಾಭವಾಗುತ್ತಿದೆಯೋ, ನಷ್ಟವಾಗುತ್ತಿದೆಯೋ ಎಂಬುದನ್ನು ಯೋಚಿಸಲೂ ಹೆದರುವ ಸ್ಥಿತಿಯಲ್ಲಿದ್ದೇನೆ. ಷೇರುಪೇಟೆಯ ಜೂಜಿನಲ್ಲಿ ಸಾಕಷ್ಟು ಸಂಪತ್ತು ಕಳೆದಿದ್ದೇನೆ. ಅಂದಿನ ದರ್ಪದ ಕೋಟ್ಯಾಧೀಶ ಸಾಹುಕಾರ, ಇಂದು ಒಬ್ಬ ಮಧ್ಯಮ ದರ್ಜೆಯ ಸಾಹುಕಾರನಷ್ಟೆ ಆಗಿದ್ದೇನೆ. 

ಅವನಿಗೆ ಇಪ್ಪತ್ತು ಲಕ್ಷ ಕೊಟ್ಟರೆ ನಾನು ಬೀದಿಯಲ್ಲಿ ನಿಲ್ಲಬೇಕಾಗುತ್ತದೆ. ಅವನಿಗಿನ್ನೂ ೪೦ ವರ್ಷ, ಮದುವೆ ಆಗುತ್ತಾನೆ. ಸಂತೋಷಪಡುತ್ತಾನೆ, ನನ್ನ ಹಣದಲ್ಲಿ ಮೋಜು ಮಾಡುತ್ತಾನೆ.  ನಾನು ಅವನ ಎದುರು ಭಿಕಾರಿಯಂತೆ ಕಾಣುತ್ತಿರುತ್ತೇನೆ. ಎಲ್ಲಾದರೂ ಸಿಕ್ಕಾಗ ನಾನು ನಿಮಗೆ ಆಭಾರಿಯಾಗಿದ್ದೇನೆ, ನಿಮಗೆ ನಾನೇದರೂ ಸಹಾಯ ಮಾಡಲೇನುಎಂದು ಹೇಳಲೂಬಹುದು. ಛೇ! ಹಾಗೆ ಅವನಿಂದ ಇಂತಹ ಮಾತುಗಳನ್ನು ಕೇಳುವುದಕ್ಕಿಂತಲೂ ಸಾಯುವುದೇ ಮೇಲು. ಹೌದು, ಸಾಯುವುದೇ ಮೇಲು.

(ಕ್ಷಣಕಾಲ ಮೌನ. ಇದ್ದಕ್ಕಿಂದ್ದಂತೆ ಸಾಹುಕಾರನ ಮುಖದ ಮೇಲೆ ಮಂದಹಾಸ ಮೂಡುತ್ತದೆ)
ಹೌದು! ಸಾಯುವುದೇ ಮೇಲು, ಆದರೆ ನಾನೇ ಏಕೆ ಸಾಯಬೇಕು. ನಾಳೆ ಅವನು ಹಣ ಪಡೆಯುವ ಸಮಯದೊಳಗೆ ಅವನೇ ಸತ್ತರೆಹೌದು! ಅವನು ಸೂರ್ಯೋದಯವನ್ನು ನೋಡಬಾರದು. ನನ್ನ ಹಣ ನನ್ನಲ್ಲೇ ಉಳಿಯಬೇಕು (ಗಡಿಯಾರದತ್ತ ನೋಡಿ) ಈಗಿನ್ನೂ ರಾತ್ರಿ ಮೂರು ಗಂಟೆ. ಸೂರ್ಯೋದಯಕ್ಕಿನ್ನೂ ಸಮಯವಿದೆ. ನಾನೀಗಲೇ ನನ್ನ ಕೆಲಸವನ್ನು ಮುಗಿಸಬೇಕು. ಹೊರಗೆ ಕೇವಲ ತರಗಲೆಗಳ ಸದ್ದು ಬಿಟ್ಟರೆ ನೀರವ ವಾತಾವರಣ. ನನ್ನ ಕೆಲಸ ಮುಗಿಸಲು ಇದೇ ಸರಿಯಾದ ವೇಳೆ.

(ಮೇಜಿನ ಸೆಳೆಮನೆಯಿಂದ ಕೀಲಿಕೈ ಗೊಂಚಲೊಂದನ್ನು ತೆಗೆದು ಹೊರಡುತ್ತಾನೆ)


ತೆರೆ ಬೀಳುವುದು
***********************

ದೃಶ್ಯ - ೨

(ರಂಗದ ಮೇಲೆ ಒಂದು ಮೇಜು, ಮೇಜಿನ ಮೇಲೆ ತಲೆ ಇಟ್ಟು ಬಂಧಿ ಮಲಗಿದ್ದಾನೆ, ಮುಂದೆ ಒಂದು ಪತ್ರ, ಮೇಜಿನ ಮೇಲೊಂದು ಮೇಣದ ಬತ್ತಿ ಉರಿಯುತ್ತಿದೆ. ಕಳ್ಳ ಹೆಜ್ಜೆಯಲ್ಲಿ ಸಾಹುಕಾರ ಬರುತ್ತಾನೆ.)

ಸಾಹುಕಾರ: (ಸ್ವಗತ) ಮಲಗಿದ್ದಾನೆ.
೧೫ ವರ್ಷಗಳ ಹಿಂದಿನ ತರುಣ, ಈಗಿನ ಸ್ಥಿತಿ ನೋಡಿದರೆ ಭಯವಾಗುತ್ತದೆ. ಮೂಳೆಗಳ ಹಂದರ, ಬಡಕಲಾಗಿ ಹೋಗಿದ್ದಾನೆ, ಬಡಪಾಯಿ, ಲಕ್ಷಗಳ ಕನಸು ಕಾಣುತ್ತಿರಬೇಕು, ನನ್ನ ಹಣದಿಂದ ಸ್ವರ್ಗ ಕೊಳ್ಳುವ ಯೋಜನೆ ಇರಬೇಕು. ಆದರೆ ನಾನು ಇವನನ್ನು ನೇರ ಸ್ವರ್ಗಕ್ಕೇ ಕಳುಹಿಸುತ್ತೇನೆ. ಆ ಚಾಪೆಯ ಮೇಲೆ ಇವನ ಬಡಕಲು ದೇಹವನ್ನೆಸೆದು ದಿಂಬಿನಿಂದ ಒತ್ತಿ ಹಿಡಿದರೆ ಆಯಿತು. ಎಂತಹಾ ಪತ್ತೆದಾರನೂ ಪತ್ತೆ ಮಾಡಲಾಗದ ಕೊಲೆ. 
(ಗಮನ ಮೇಜಿನ ಮೇಲಿನ ಪತ್ರದತ್ತ ಹರಿಯುತ್ತದೆ). 
ಇದೇನಿದು…! ಏನೋ ಪತ್ರ.  ಇನ್ನೂ ನನಗೆ ತಲುಪಿಸದ ಬೇಡಿಕೆ ಪತ್ರ ಇರಬೇಕು. ಇರಲಿ ಇದೇನೆಂದು ನೋಡಿಬಿಡುತ್ತೇನೆ. ಆಮೇಲೆ ನಿನ್ನನ್ನು ನೋಡಿಕೊಳ್ಳುತ್ತೇನೆ.
(ಪತ್ರವನ್ನು ಮೆಲ್ಲನೆ ಎತ್ತಿಕೊಂಡು ಓದತೊಡಗುತ್ತಾನೆ)

ಬಂಧಿ ಮಲಗಿರುವಾಗ ಅವನ ಪತ್ರ ಓದುತ್ತಿರುವ ಸಾಹುಕಾರ 
ಚಿತ್ರಕೃಪೆ: http://bettysenglish2.blogspot.in
ಪ್ರಿಯ ಬಂಧಕ - ನಾಳೆ ಮಧ್ಯಾಹ್ನ ೧೨ ಗಂಟೆಗೆ ನಾನು ನನ್ನ ಸ್ವಾತಂತ್ರ್ಯವನ್ನು ಮರಳಿ ಪಡೆಯುವವನಿದ್ದೇನೆ. ಸಹ ಮಾನವರೊಡನೆ ಬೆರೆಯುವ ಅಧಿಕಾರ ಪಡೆಯಲಿದ್ದೇನೆ. ಆದರೆ ನಾನೀ ಕೋಣೆಯನ್ನು ಬಿಟ್ಟು ಹೊರಗಿನ ಸೂರ್ಯರಶ್ಮಿಯನ್ನು ನೋಡುವ ಮೊದಲು, ದೇವರ ಸಾಕ್ಷಿಯಾಗಿ, ನನ್ನ ಪೂರ್ಣಪ್ರಜ್ಞೆಯಲ್ಲಿ, ನಿನಗೆ ಅಗತ್ಯವೆನಿಸಿದ ಕೆಲವು ವಿಷಯಗಳನ್ನು ಹೇಳಲು ಇಚ್ಚಿಸಿರುವೆ. ಸ್ವಾತಂತ್ರ್ಯ, ಜೀವನ, ಆರೋಗ್ಯ, ಮತ್ತು ಇನ್ನೂ ಯಾವುದೆಲ್ಲಾ ವಸ್ತು ವಿಷಯಗಳನ್ನು ನಿನ್ನ ಪುಸ್ತಕಗಳು ಒಳ್ಳೆಯದೆಂಬಂತೆ ಬಿಂಬಿಸಿವೆಯೋ ಅದೆಲ್ಲವನ್ನೂ ನಾನು ತಿರಸ್ಕರಿಸುತ್ತಿದ್ದೇನೆ.

ಹದಿನೈದು ವರ್ಷಗಳಿಂದ ನೀನು ಕಳುಹಿಸಿದ ಪುಸ್ತಕಗಳಿಂದ ನಾನು ಮಾನವ ಸಂಪರ್ಕವಿಲ್ಲದೆಯೂ ಈ ಲೌಕಿಕ ಜೀವನದ ಅಧ್ಯಯನ ಮಾಡಿರುವೆ. ನಿನ್ನ ಪುಸ್ತಕಗಳು ನನಗೆ ಅಮೃತ ಪಾನ ಮಾಡಿಸಿವೆ. ಗೀತೆಗಳನ್ನು ಹಾಡಿಸಿವೆ. ಮೃಗಯಾ ಬೇಟೆಗೂ, ಕಾಮಿನಿಯರೊಡನೆ ಬೇಟಕ್ಕೂ ನನ್ನನ್ನು ಸೆಳೆದೊಯ್ದಿವೆ. ಆ ನಿನ್ನ ಪುಸ್ತಕಗಳ ಮೂಲಕವೇ ನಿನ್ನ ಕವಿಗಳೂ, ಪ್ರಬುದ್ಧರೂ ರಾತ್ರಿಯಲ್ಲಿ ನನ್ನ ಕಿವಿಯಲ್ಲಿ ಮನಮೋಹಕ ಕಥೆಗಳನ್ನು ಪಿಸುಗುಡುತ್ತಿದ್ದರು.

ನಿನ್ನ ಪುಸ್ತಕಗಳಿಂದಲೇ ನಾನು ಪರ್ವತ ಶಿಖರಗಳ ಮೇಲೆ ನಿಂತು ಸೂರ್ಯೋದಯವನ್ನು ಕಣ್ಣು ತುಂಬಿಕೊಂಡಿದ್ದೇನೆ. ಅಸೀಮ ಸಾಗರ, ಅನಂತ ಆಕಾಶ, ಮತ್ತು ಹೊಂಬಣ್ಣದಲ್ಲಿ ಮಿನುಗುವ ಪರ್ವತ ಶಿಖರಗಳನ್ನೂ, ನನ್ನ ತಲೆಯ ಮೇಲೆಯೇ ಹಾದು ಹೋದ ಮಿಂಚಿನ ಬಳ್ಳಿಯನ್ನೂ ನೋಡಿದ್ದೇನೆ. ಹಸಿರು ಕಾಡು, ಹೊಲ, ನದಿ, ಸರೋವರ, ನಗರಗಳನ್ನು ಕಂಡಿದ್ದೇನೆ. ಕಿನ್ನರರ ಗೀತೆಗಳನ್ನೂ, ದನಗಾಹಿಗಳ ಕೊಳಲ ನಾದವನ್ನೂ ಕೇಳಿದ್ದೇನೆ... ದೇವರ ಬಗ್ಗೆ ನನ್ನ ಬಳಿ ಮಾತನಾಡಲು ಬಂದ ದೇವದೂತರ ರೆಕ್ಕೆಗಳನ್ನೂ ಸಹ ಮುಟ್ಟಿದ್ದೇನೆ.
ನಿನ್ನ ಪುಸ್ತಕಗಳಿಂದ ನಾನು ತಳವಿಲ್ಲದ ಬಾವಿಯಲ್ಲಿ ಬಿದ್ದೆ. ನಿನ್ನ ಪುಸ್ತಕಗಳಿಂದಲೇ ನಾನು ಪವಾಡಗಳನ್ನು ಮಾಡಿದೆ. ಕೊಲೆಗಳನ್ನು ಮಾಡಿದೆ. ನಗರಗಳನ್ನು ಸುಟ್ಟು ಹೊಸಕಿ ಹಾಕಿದೆ, ಹೊಸ ಧರ್ಮವನ್ನು ಹುಟ್ಟು ಹಾಕಿದೆ. ರಾಜ್ಯಗಳನ್ನು ಕಟ್ಟಿದೆ.

ಪುಸ್ತಕಗಳು ನನಗೆ ಜ್ಞಾನ ಕೊಟ್ಟವು, ಮಾನವ ಜನಾಂಗದ ಇದುವರೆಗಿನ ಎಲ್ಲ ಚಿಂತನೆಗಳನ್ನೂ ನನ್ನ ಸಣ್ಣ ಮೆದುಳಿನ ಪರಿಧಿಯಲ್ಲಿ ತುಂಬಿದವು. ನಾನು ನಿನಗಿಂತ ಹೆಚ್ಚು ತಿಳಿದವನು ಎಂಬ ಅರಿವು ನನಗಿದೆ.

“ನಾನೀಗ ಪರಮ ಸತ್ಯವೊಂದನ್ನು ಕಂಡುಕೊಂಡಿದ್ದೇನೆ.
ನಾನು ನಿನ್ನ ಎಲ್ಲಾ ಪುಸ್ತಕಗಳನ್ನೂ, ಎಲ್ಲಾ ಜ್ಞಾನವನ್ನೂ, ಈ ಜಗದ ಹಾರೈಕೆಗಳನ್ನೂ ತಿರಸ್ಕರಿಸುತ್ತೇನೆ. ಅವು ಮೌಲ್ಯರಹಿತ, ಕ್ಷಣಿಕ, ಮರೀಚಿಕೆಯಂಥಾ ಮಿಥ್ಯೆಗಳು. ನಿನಗೆ ನಿನ್ನ ಬಗ್ಗೆ ಅಭಿಮಾನವಿರಬಹುದು. ನೀನು ತಿಳುವಳಿಕಸ್ಥನಾಗಿರಬಹುದು, ನೀನು ಸುಖವಾಗಿಯೂ ಇರಬಹುದು. ಆದರೆ ಮೃತ್ಯು ಅವನ್ನೆಲ್ಲಾ ಈ ಭೂಮಂಡಲದಿಂದ ಒರೆಸಿ ಹಾಕುತ್ತದೆ. ಲೌಕಿಕದ ನಶ್ವರತೆ ಭೂಗತ ಇಲಿಗಳಿಗೂ ನಿನಗೂ ವ್ಯತ್ಯಾಸವೇನಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ. ನಿನ್ನ ಎಲ್ಲಾ ವೈಭೋಗವೂ ಇಲ್ಲೇ ಈ ಲೌಕಿಕ ಜಗತ್ತಿನಲ್ಲಿ ಸುಟ್ಟುಹೋಗುತ್ತದೆ.

ನೀನು ಈ ಭೂಮಿಗೆ ಬಂದ ಕಾರಣವನ್ನೇ ಮರೆತು ತಪ್ಪು ದಾರಿ ಹಿಡಿದಿರುವೆ. ಸತ್ಯ ಕೊಟ್ಟು ಸುಳ್ಳು ಪಡೆವ, ಸೌಂದರ್ಯ ಕೊಟ್ಟು ಕುರೂಪ ಪಡೆವ ನಿನ್ನ ಈ ಜಗತ್ತಿನ ವ್ಯಾಪಾರ ಬಲು ವಿಚಿತ್ರ. ಗಿಡಗಳಲ್ಲಿ ಹಣ್ಣಿನ ಬದಲು ಹಲ್ಲಿ ಕಪ್ಪೆಗಳು ಬಿಟ್ಟರೆ ನೀನೆಂತು ಆಶ್ಚರ್ಯಪಡುವೆಯೋ ಅಂತೆಯೇ ಸ್ವರ್ಗದ ಬದಲಿಗೆ ನರಕ ಪಡೆಯುವ ನಿನ್ನನ್ನು ನೋಡಿ ನಾನೂ ಆಶ್ಚರ್ಯ ಪಡುತ್ತೇನೆ. ಆದರೆ ಹಾಗೇಕೆಂದು ತಿಳಿಯುವ ಆಸಕ್ತಿ ನನಗಿನ್ನು ಉಳಿದಿಲ್ಲ.

ನಿನ್ನ ಜೀವನದ ವೈಭೋಗ, ಸಮೃದ್ಧಿ, ಎಲ್ಲವೂ ಕ್ಷಣಿಕ, ನಶ್ವರ ಅವೆಲ್ಲವನ್ನೂ ನಾನು ತಿರಸ್ಕರಿಸುತ್ತಿದ್ದೇನೆ ಎಂಬುದನ್ನು ನಿನಗೆ ಪ್ರತ್ಯಕ್ಷವಾಗಿ ಕಾರ್ಯರೂಪದಲ್ಲಿ ಸಾಧಿಸಿ ತೋರಿಸಲು ನಾನು ನಿನ್ನ ಇಪ್ಪತ್ತು ಲಕ್ಷಗಳನ್ನು ತಿರಸ್ಕರಿಸುತ್ತಿದ್ದೇನೆ. ನಾನು ಆ ಹಣದಿಂದ ಸ್ವರ್ಗ ಕಟ್ಟುವ ಕನಸು ಕಾಣುತ್ತಿದ್ದೆ. ಅದಕ್ಕೆಂದೇ ಈ ಸೆರೆವಾಸವನ್ನು ಆಯ್ದುಕೊಂಡೆ. ಆದರೆ ಬಂಧನದ ಅವಧಿಗಿಂತ ಐದು ಗಂಟೆ ಮುಂಚಿತವಾಗಿ ಸ್ವ ಇಚ್ಚೆಯಿಂದ ಈ ಬಂಧನದಿಂದ ಹೊರ ಹೋಗುವ ಮೂಲಕ ನಾನು ಕರಾರನ್ನು ಮುರಿಯುತ್ತಿದ್ದೇನೆ. ತನ್ಮೂಲಕ ನನ್ನನ್ನು ನಾನು ಆ ಹಣದಿಂದ ವಂಚಿತಗೊಳಿಸುತ್ತಿದ್ದೇನೆ. ನಾನು ಹೊರ ಹೋದ ನಂತರವೇ ನಿನಗೆ ಈ ಪತ್ರ ಸಿಗಲೆಂದು ಇತರ ಬೇಡಿಕೆ ಪತ್ರಗಳಂತೆ ನಾನಿದನ್ನು ಕಿಟಕಿಯ ಮೂಲಕ ನಿನಗೆ ತಲುಪಿಸುತ್ತಿಲ್ಲ.
 (ಸಾಹುಕಾರ ಅಷ್ಟನ್ನೂ ಓದಿದ ಮೇಲೆ ಆ ಹಾಳೆಯನ್ನು ಅಲ್ಲೇ ಇಡುತ್ತಾನೆ. ಅವನ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಿರುತ್ತದೆ, ಮಲಗಿರುವ ಬಂಧಿಯ ತಲೆಯ ಮೇಲೊಂದು ಮುತ್ತಿಟ್ಟು ಕಣ್ಣೀರನ್ನು ಒರೆಸದೇ, ಅಳುತ್ತಲೇ ನಿಶ್ಯಬ್ದವಾಗಿ ಅಲ್ಲಿಂದ ಹೊರಬೀಳುತ್ತಾನೆ.)

ಅವಧೂತ ಮನಸ್ಥಿತಿ ತಲುಪಿರುವ ಬಂಧಿಯನ್ನು ನೋಡಿ ಅತಿಥಿ ಗೃಹದಿಂದ ಹೊರಬಂದ ಸಾಹುಕಾರ.
ಚಿತ್ರಕೃಪೆ: http://bettysenglish2.blogspot.in

ತೆರೆ ಬೀಳುವುದು
***********************

2 comments:

  1. ಬಹಳ ಚನ್ನಾಗಿದೆ. ಖುಶಿ ಕೊಡ್ತು. ಕನ್ನಡದ್ದೇ ನಾಟಕ ಎಂಬಂತಿತ್ತು.
    ಧನ್ಯವಾದಗಳು

    ReplyDelete