Sunday 23 December 2012

ತರುವಾದ ಲತೆ - ಪಲ್ಲೆಕಾಯಿ ಬಳ್ಳಿ.


Tree or Vine?!
ತರುವೋ, ಲತೆಯೋ?!
ಪಲ್ಲೆಕಾಯಿ ಬಳ್ಳಿಯ ಕಾಂಡ
ಲತೆ(ಬಳ್ಳಿ)ಯಂಥಾ ತರು(ಮರ),
ಅಥವಾ ತರುವಿನಂಥಾ ಲತೆ?!

ಲತೆ’, ‘ತರು’ವ ಬಯಸುವುದು ಸಹಜ
ತರು’ವೇ ‘ಲತೆ’ ಯಂತಾದರೆ ‘ಲತೆ’ ಬಯಸುವಳೇ...
ಇದು ‘ಲತೆ’ಯೇ ಹೌದಾದರೆ
ತರು’ವಿನಂಥಾ ‘ಲತೆ’ಯ ‘ತರು’ ಒಪ್ಪುವುದೇ?!

 ‘ಹೆಣ್ಣಿಗ’ನ ಕಟ್ಟಿಕೊಂಡ ಹುಡುಗಿಯಂತೆ,
ಗಂಡುಭೀರಿ’ಯ ಕಟ್ಟಿಕೊಂಡ ಹುಡುಗನಂತೆ
Callingcard Vine,
Centre for Ecological Sciences,IISc, Bangalore,
ಪಾಲೆಕಾಯಿ ಬಳ್ಳಿ
ಪರಿಸರ ವಿಜ್ಞಾನ ಕೇಂದ್ರ,
ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು



 ಜತೆಯ ತರು ಲತೆಗಳು ಅನುಭವಿಸಬೇಕು


 ಅಥವಾ
ಇದನ್ನು ಎರಡೂ ಸುಖವನುಭವಿಸುವ ‘ಭೋಗಿ’ ಎನ್ನೋಣವೇ?
ಲತೆ’ಗೆ ‘ತರು’ವಾಗಿ, ‘ತರು’ವಿಗೆ ‘ಲತೆ’ಯಾಗಿ…

ಸಾಕು, ಜಾಸ್ತಿಯಾಯಿತು ನನ್ನ ಪುರಾಣ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (IISc) ಆವರಣದ ಪರಿಸರ ವಿಜ್ಞಾನ ಕೇಂದ್ರದ (Centre for Ecological Science) ಮುಂದಿನ ಅಪರೂಪದ, ಬಳ್ಳಿ-ಮರದಂಥಾ ಸಸ್ಯ.

ನಾನೊಬ್ಬ ಸಸ್ಯಶಾಸ್ತ್ರಿ ಅಲ್ಲದ್ದರಿಂದ ಹೆಚ್ಚಿನ ವಿವರಗಳು ನನ್ನಲ್ಲಿಲ್ಲ. ಅಲ್ಲಿಯ ಗಿಡದ ಮೇಲಿನ ಫಲಕದ ಪ್ರಕಾರ ಇದು ಭಾರತ, ಶ್ರೀಲಂಕಾ, ಆಫ್ರಿಕಾವನ್ನು ತವರಾಗಿ ಹೊಂದಿದ ಎಪ್ರಿಲ್‌ನಲ್ಲಿ ಹೂಬಿಡುವ Mimosaceae ಸಸ್ಯಶಾಸ್ತ್ರ ಕುಟುಂಬಕ್ಕೆ ಸೇರಿದ ಸಸ್ಯ.
ಸಸ್ಯಶಾಸ್ತ್ರೀಯ ಹೆಸರು: Entada rheedei Spreng
ಇಂಗ್ಲೀಷ್‍ ಹೆಸರು: Callingcard Vine
ಕನ್ನಡದಲ್ಲಿ ಪಲ್ಲೆಕಾಯಿ ಬಳ್ಳಿ ಎನ್ನುತ್ತಾರಂತೆ.



ಭಾರತೀಯ ವಿಜ್ಞಾನ ಮಂದಿರ ಮುಸ್ಸಂಜೆಯಲ್ಲಿ
ಭಾರತೀಯ ವಿಜ್ಞಾನ ಮಂದಿರ ಆಡಳಿತ ಕಛೇರಿ.


ರಸ್ತೆಗೆ ನುಗ್ಗುತ್ತಿರುವ ಮರದ ಕೊಂಬೆಗೆ ಆಧಾರ ಕೊಟ್ಟು ರಕ್ಷಿಸಿರುವುದು.
ಬೇರೆಡೆ ಆಗಿದ್ದರೆ ಕೊಂಬೆ ಉಳಿಯುತ್ತಿದ್ದುದ್ದು ಸಂಶಯ.
ವಿಜ್ಞಾನ ಮಂದಿರದ ಮುಖ್ಯ ಕಟ್ಟಡದ ಮೊದಲ ಮಹಡಿಗೆ ಏರೇಣಿ (Lift) ಸಹ ಇದೆ.
ಅನವಶ್ಯಕವಾಗಿ ಬಳಸದಿರಲಿ ಎಂದು ಪಕ್ಕದಲ್ಲೇ ಒಂದು ಫಲಕ ಸಹ.
ಕೇವಲ ಒಂದು ಮಹಡಿಯ ಹತ್ತುವಿಕೆ ಇಳಿಯುವಿಕೆಗೆ
 ಅನಿವಾರ್ಯವಲ್ಲದ ಸಮಯದಲ್ಲೂ ಸುಮ್ಮನೆ ಬಳಸಿ ವಿದ್ಯುತ್  ದುಂದು ಮಾಡದಿರಲಿ ಎಂಬ ಆದರ್ಶ




ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಸಂಸ್ಥೆ ಭಾರತೀಯ ವಿಜ್ಞಾನ ಮಂದಿರ, ಅಲ್ಲಿನ ಆಡಳಿತ, ಮತ್ತು ವಿದ್ಯಾರ್ಥಿಗಳ ಪರಿಸರ ಕಾಳಜಿ, ಅಲ್ಲಿ ಹೋದವರನ್ನ ಮುಟ್ಟದೇ ಬಿಡುವುದಿಲ್ಲ ಅಲ್ಲಿ ಹೋಗಿಯೇ ಸವಿಯಬೇಕು. ತಾನಾಗೇ ಬಿದ್ದ ಮರವನ್ನೂ ತೆಗೆಯದೇ, ಕಗ್ಗಾಡಿನ ನಡುವೆ ಆ ಮರ ಹೇಗೆ ಗೆದ್ದಲು, ಮೊದಲಾದ ಜೀವ ಜಂತುಗಳಿಗೆ ಆಹಾರವಾಗಿ, ವರ್ಷಗಳ ನಂತರ ಇಲ್ಲವಾಗುತ್ತದೋ ಹಾಗೆಯೇ ಇಲ್ಲೂ ಅಂತೆ, ಅಲ್ಲಿನ ವಿದ್ಯಾರ್ಥಿನಿ ಹೇಳಿದ ಮಾತು, ಅಲ್ಲಿ ಈ ವನರಾಜಿಯನ್ನ ರಕ್ಷಿಸಲು ವಿದ್ಯಾರ್ಥಿ ಸಮೂಹ ಟೊಂಕ ಕಟ್ಟಿ ನಿಂತಿರುತ್ತದೆ. ಇಲ್ಲದಿದ್ದರೆ ಬೆಂಗಳೂರಿನ ಉಳಿದ ರಸ್ತೆ ಮರಗಳಂತೆ ಇಲ್ಲೂ ಎಲ್ಲವೂ ನೆಲಸಮವಾಗಿರುತ್ತಿತ್ತು ಎಂದಳು. ಮರವಿರಲಿ, ಒಂದು ಕೊಂಬೆಯನ್ನು ಕಡಿಯುವುದು ಸಹ ಇಲ್ಲಿ ಸುಲಭವಲ್ಲ. ಕ್ಯಾಂಪಸ್‌ನೊಳಗಿನ ರಸ್ತೆಗಳಿಗೆ ನುಗ್ಗುವ ಮರದ ಕೊಂಬೆಗಳನ್ನೂ ಕತ್ತರಿಸದೇ, ಆಧಾರ ನೀಡಿ ರಕ್ಷಿಸಿ, ಕಾಂಕ್ರಿಟ್ ಕಾಡು ಬೆಂಗಳೂರಿನ ಮಧ್ಯೆ, ಜಗತ್ತಿನ ನಿತ್ಯಹರಿದ್ವರ್ಣದ ಕಾಡುಗಳಿಂದ ತಂದ ಮರಗಳ ವನಸಿರಿ ನಿಮ್ಮನ್ನ ಸೆಳೆಯದಿದ್ದರೆ ಕೇಳಿ. ಅಲ್ಲಿನ ಪ್ರತಿ ರಸ್ತೆಯೂ ಒಂದು ಮರದ ಹೆಸರಿನಲ್ಲಿ, ಉದಾಹರಣೆಗೆ, ಗುಲ್ ಮೊಹರ್ ಮಾರ್ಗ, ಮಹಾಗೊನಿ ಮಾರ್ಗ, ಅಂದರೆ ಗುಲ್ ಮೊಹರ್ ಮಾರ್ಗದ ಇಕ್ಕೆಲಗಳಲ್ಲಿ ಗುಲ್ ಮೊಹರ್ ಮರಗಳು, ಮಹಾಗೊನಿ ಮಾರ್ಗದ ಇಕ್ಕೆಲಗಳಲಿ ಮಹಾಗೊನಿ ಮರಗಳು........ ಕಟ್ಟಡವಿಲ್ಲದೆಡೆಯೆಲ್ಲಾ ವನಸಿರಿ. ಗೂಗಲ್ ಅರ್ಥ್‌ನಲ್ಲಿ ಬೆಂಗಳೂರನ್ನ ನೋಡಿದರೆ ಕಾಂಕ್ರಿಟ್ ಕಾಡಿನ ಮಧ್ಯೆ ಹಸಿರು ತೇಪೆಯಂತೆ ಕಾಣುವ ಭಾರತೀಯ ವಿಜ್ಞಾನ ಮಂದಿರದಲ್ಲಿ ಬೇರೆ ತಂತ್ರಜ್ಞಾನ ಕಾಲೇಜುಗಳಂತೆ, ಬೈಕ್‌, ಸ್ಕೂಟರೆಟ್‌ಗಳ ಆರ್ಭಟವಿಲ್ಲ. (ಬಹಳಷ್ಟು ವಿದ್ಯಾರ್ಥಿಗಳು ಬಳಸೋದು ಸೈಕಲ್)  ಶಬ್ದ - ವಾಯು ಮಾಲಿನ್ಯದಿಂದಲೂ ದೂರ,  ಅನವಶ್ಯಕವಾಗಿ ಯಾವುದೂ ಬಳಸಲ್ಪಡಬಾರದು ಎಂಬ ಜೀವನ ಮೌಲ್ಯವನ್ನ ಕಲಿತ ವಿದ್ಯಾರ್ಥಿಗಳಿಗಿಂತ ಮೌಲ್ಯಯುತವಾದ ಆಸ್ತಿ ದೇಶವೊಂದಕ್ಕೆ  ಬೇರೆ ಯಾವುದಾದರೂ ಇದೆಯೇ.

Friday 9 March 2012

ಮಾನಾಪಮಾನಗಳ ಎಲ್ಲೆಯನ್ನು ಮೀರಿ....


ಪಂಡಿತ ಮದನ ಮೋಹನ ಮಾಳವೀಯ
ರಾಷ್ಟ್ರನಿರ್ಮಾತೃಗಳಲ್ಲಿ ಒಬ್ಬರೆನಿಸಿದ ಪಂಡಿತ ಮದನ ಮೋಹನ ಮಾಳವೀಯರು ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಸ್ಥಾಪಕರು. ಒಂದು ಮಾದರಿ ವಿಶ್ವವಿದ್ಯಾನಿಲಯವನ್ನ ಕಟ್ಟಬೇಕೆಂದಿದ್ದ ಅವರು ಜೋಳಿಗೆ ಹಿಡಿದು ರಾಜ ಮಹಾರಾಜರು, ಶ್ರೀಮಂತ ವಣಿಕರು, ಎಲ್ಲೆಡೆಯೂ ಹೋಗಿ ಭಿಕ್ಷೆಯೆಂಬಂತೆ ಹಣ ಸಂಗ್ರಹಿಸುತ್ತಿದ್ದರು.  ಪ್ರಪಂಚದ ಶ್ರೀಮಂತರಲ್ಲಿ ಅಂದಿನ ದಿನಮಾನಕ್ಕೆ ಹೈದರಾಬಾದಿನ ನಿಜಾಮ ಗಣಿಸಲ್ಪಡುತ್ತಿದ್ದ. ದೇಶ ತಿರುಗಿ ಸಂಗ್ರಹಿಸುತ್ತಿದ್ದ ಮಾಳವೀಯ ಹೈದರಬಾದಿಗೂ ಹೋದರು. ನಿಜಾಮನನ್ನು ಭೇಟಿಯಾಗಬಯಸಿದರು. ನಿಜಾಮನಿಗೆ ಸುದ್ದಿ ಹೋಯಿತು. “ಉತ್ತರ ಭಾರತದಿಂದ ಒಬ್ಬ ಬ್ರಾಹ್ಮಣ ಬಂದು ಬೇಡುತ್ತಿದ್ದಾರೆ, ವಿಶ್ವವಿದ್ಯಾನಿಲಯ ಕಟ್ಟಲಂತೆ.” ನಿಜಾಮ ನಿರಾಕರಿಸಿಬಿಟ್ಟ.

ನಿಜಾಮನ ಅರಮನೆಯಿಂದ ಬರಿಗೈಲಿ ವಾಪಸಾದರೂ ಧನ ಸಂಗ್ರಹಣದ ಧ್ಯೇಯ ಅವರಲ್ಲಿತ್ತು. ಆ ಸಮಯದಲ್ಲಿ ಅಲ್ಲೇ ಯಾರೋ ಶ್ರೀಮಂತನೊಬ್ಬನ ಶವ ಸ್ಮಶಾನದ ಹಾದಿ ಹಿಡಿದಿತ್ತು. ಶವದ ಹಿಂದೆ ಹೊರಟವರು ಚೆಲ್ಲುತ್ತಿದ್ದ ನಾಣ್ಯಗಳನ್ನು ಮಾಳವೀಯ ಆಯತೊಡಗಿದರು. ಈ ಕಾರ್ಯ ನೋಡಿ, ಸುತ್ತಮುತ್ತಲಿನ ಜನ ಮಾಳವೀಯರ ಉದ್ದೇಶವನ್ನ ಕೇಳಿ ತಿಳಿದು ನಾಣ್ಯಗಳನ್ನ ಆಯ್ದು ಕೊಡತೊಡಗಿದರು. ಜೋಳಿಗೆ ತುಂಬತೊಡಗಿತು. ಸುದ್ದಿ ತಿಳಿದ ನಿಜಾಮನಿಗೆ ನಾಚಿಕೆಯಾಯಿತು. ಮಾಳವೀಯರನ್ನ ಮತ್ತೆ ಕರೆಸಿ ಹೇರಳವಾಗಿ ದಾನ ಕೊಟ್ಟ.

ಇನ್ನೊಂದು ದಂತಕಥೆ ಹೀಗಿದೆ. (ಈ ಕಥೆಯನ್ನ ನಾನು ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಸಮಾರಂಭವೊಂದರಲ್ಲಿ ಹೇಳಿದೆ. ಅಲ್ಲಿ ನೆರೆದಿದ್ದ ವಿದ್ಯಾರ್ಥಿವೃಂದ ಮತ್ತು ಉಪನ್ಯಾಸಕರಿಗೇ ಈ ಪ್ರಸಂಗ ಗೊತ್ತಿರಲಿಲ್ಲವಂತೆ.)

ಮಾಳವೀಯ ನಿಜಾಮನ ಬಳಿ ಬಂದು ಜೋಳಿಗೆ ಹಿಡಿದರು

ನಿಜಾಮ: ಭಿಕ್ಷೆ ಎತ್ತಲು ನಾಚಿಕೆಯಿಲ್ಲವೆ?
ಮಾಳವೀಯ: ಬ್ರಾಹ್ಮಣನಿಗೆ ಭಿಕ್ಷೆ ಎತ್ತಲು ಎಂಥಾ ನಾಚಿಕೆ ಮಹಾಸ್ವಾಮಿ.
ನಿಜಾಮ: ಏತಕ್ಕಾಗಿ ಹಣ ಕೊಡಬೇಕು.
ಮಾಳವೀಯ: ಕಾಶಿಯಲ್ಲಿ ಭಾರತೀಯರೇ ನಡೆಸುವ, ರಾಷ್ಟ್ರೀಯ ಭಾವನೆಯನ್ನ ಜಾಗೃತಗೊಳಿಸುವ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯ ಕಟ್ಟಬೇಕಿದೆ. ಅದಕ್ಕೆ ಹಣದ ಅಗತ್ಯವಿದೆ.
ನಿಜಾಮ: ವಿಶ್ವವಿದ್ಯಾನಿಲಯದ ಹೆಸರು?
ಮಾಳವೀಯ: ಕಾಶಿ ಹಿಂದೂ ವಿಶ್ವವಿದ್ಯಾನಿಲಯ.

ಮತಾಂಧನಾಗಿದ್ದ ನಿಜಾಮನಿಗೆ ಸಿಟ್ಟು ತಡೆಯಲಾಗಲಿಲ್ಲ. 
ನಿಜಾಮ: ಹಿಂದೂ ವಿಶ್ವವಿದ್ಯಾನಿಲಯ ಕಟ್ಟಲು ನನ್ನ ಬಳಿ ಹಣ ಕೇಳಲು ಬರಲು ಎಷ್ಟು ಧೈರ್ಯ?
ನಿಜಾಮ ಕೋಪದಲ್ಲಿ ಕಾಲಿಗೆ ಹಾಕಿದ ಚಪ್ಪಲಿ ತೆಗೆದು ಮಾಳವೀಯರ ಮುಖದ ಮೇಲೆ ಎಸೆದ

(ಕಥೆಗೆ ಒಂದೆರಡು ಕ್ಷಣ ವಿರಾಮಕೊಟ್ಟು ಎಲ್ಲರ ಮುಖ ನೋಡಿದೆ. ದಂತಕಥೆ ನಿಜವೇ ಆಗಿದ್ದರೆ ತಮ್ಮ ವಿಶ್ವವಿದ್ಯಾನಿಲಯದ ಸಂಸ್ಥಾಪಕನಿಗೆ ಆಗಿರಬಹುದಾದ ಅಪಮಾನದ ಆಘಾತ ಎಲ್ಲರ ಮುಖದಲ್ಲಿತ್ತು.
ಚಪ್ಪಲಿ ಸೇವೆ ಮಾಡಿಸಿಕೊಂಡವರು ಸಾಮಾನ್ಯರಾಗಿದ್ದರೆ ಅಪಮಾನಿತರಾಗುತ್ತಿದ್ದರು. ಅಪಮಾನವಾಯಿತೆಂದು ಭಾವಿಸಿಕೊಳ್ಳುತ್ತಿದ್ದರು. ನಾವು ಭಾವಿಸುವುದೇ ತಾನೇ ಸತ್ಯ!!!. ಆದರೆ ಏನು ಮಾಡಲು ಸಾಧ್ಯ. ಆತ ರಾಜ, ಒಬ್ಬ ಸಾಮಾನ್ಯ ತಿರುಕ ಬ್ರಾಹ್ಮಣ ಏನು ತಾನೇ ಮಾಡಲು ಸಾಧ್ಯ. ಅವುಡುಗಚ್ಚಿ ಮರಳಿ ಬರಬೇಕಷ್ಟೇ.)

ಮಾಳವೀಯರು ಯೋಗಪುರುಷರು, ಯಾವ ಭಾವವಿಕಾರಕ್ಕೂ ಒಳಗಾಗಲಿಲ್ಲ. ತಮ್ಮ ಮೇಲೆ ತೂರಿಬಂದ ಚಪ್ಪಲಿಯನ್ನ ತೆಗೆದುಕೊಂಡರು. ಅದರ ಮೇಲಿನ ಧೂಳನ್ನ ತಮ್ಮ ಉತ್ತರೀಯದಿಂದ ಒರೆಸಿ, ಕಂಕುಳಿಗಿಟ್ಟುಕೊಂಡರು. ವಿನಮ್ರತೆಯಿಂದ ಕೈಮುಗಿದು ಬಾಗಿ ನಮಸ್ಕರಿಸುತ್ತಾ  “ಮಹಾಪ್ರಸಾದ ಮಹಾಸ್ವಾಮಿ, ಉಪಕಾರವಾಯಿತು. ಧನ್ಯೋಸ್ಮಿ.” ಎಂದರು. ಅರಮನೆಯಿಂದ ಹೊರಟುಬಿಟ್ಟರು.

ನಿಜಾಮ ದಂಗುಬಡಿದು ಹೋದ. ಮಾಳವೀಯರ ಹಿಂದೆ ಆಳೊಬ್ಬನನ್ನು ಅಟ್ಟಿದ. ಅವನಿಗೆ ಆಶ್ಚರ್ಯ, ಅವ್ಯಕ್ತ ಭಯ, ನನ್ನ ಚಪ್ಪಲಿ ತೆಗೆದುಕೊಂಡು ಹೋಗಿ ಇವನೇನು ಮಾಡುತ್ತಾನೋ ಎಂದು.

ಮಾಳವೀಯ ಮಾರುಕಟ್ಟೆ ಪ್ರದೇಶಕ್ಕೆ ಹೋಗಿ ಘೋಷಣೆ ಮಾಡಿದರು. ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ದೇಣಿಗೆ ಕೇಳಿದಾಗ ನಿಜಾಮ ಅವರಿಗೆ ಚಪ್ಪಲಿಯನ್ನ ದಯಪಾಲಿಸಿದ್ದು, ಅದನ್ನ ಹರಾಜು ಹಾಕಿ ಬಂದ ಹಣವನ್ನ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ಬಳಸಿಕೊಳ್ಳುತ್ತೇನೆ. ಆಸಕ್ತಿಯಿದ್ದವರು ಲೀಲಾವು ಕೂಗಬಹುದು ಎಂದು. ಅದೇನು ಸಾಮಾನ್ಯ ಚಪ್ಪಲಿಯಲ್ಲವಲ್ಲ. ಬೆಳ್ಳಿಯದು. ಮೇಲಾಗಿ ನಿಜಾಮನದು, ಬೆಲೆಬಾಳುವಂಥದ್ದು.

ಆಸಕ್ತರು ಹರಾಜು ಕೂಗತೊಡಗಿದರು. ನಿಜಾಮನಿಗೆ ಸುದ್ದಿ ಹೋಯ್ತು. ತನ್ನ ಚಪ್ಪಲಿ ಯಾರೋ ದಾರಿಹೋಕ ಕೊಂಡರೆ, ಅಥವಾ ಕಡಿಮೆ ಬೆಲೆಗೆ ಮಾರಾಟವಾದರೆ ತನಗೆ ಅವಮಾನವೆಂದು ಭಾವಿಸಿದ ನಿಜಾಮ ತಾನೇ ದೊಡ್ಡ ಮೊತ್ತ ತೆತ್ತು ತನ್ನ ಚಪ್ಪಲಿಯನ್ನ ಮರಳಿ ಕೊಂಡ. ಆ ಹಣವನ್ನ ವಿಶ್ವವಿದ್ಯಾನಿಲಯ ನಿರ್ಮಾಣ ನಿಧಿಗೆ ಮಾಳವೀಯ ಸೇರಿಸಿಕೊಂಡರು.

ಕಥೆಯ ಸತ್ಯಾಸತ್ಯತೆಗಳೇನೇ ಇರಲಿ. ನೋಡಬೇಕಾದದ್ದು ಕಲಿಯಬೇಕಾದದ್ದು ಮಾಳವೀಯರ ಮನೋಭಾವ. ತಮ್ಮ ಧ್ಯೇಯವನ್ನ ಬಿಟ್ಟು ಅವರಿಗಿನ್ನೇನೂ ಮುಖ್ಯವಾಗಿರಲಿಲ್ಲ. ಮಾನಾಪಮಾನಗಳ ಚಿಂತೆಯೂ ಅವರಿಗಿರಲಿಲ್ಲ. ಶವ ಮೆರವಣಿಗೆಯ ನಾಣ್ಯ ಆಯುವುದಿರಲಿ, ಚಪ್ಪಲ್ಲಿ ಎಸೆಸಿ ಕೊಂಡ ಸನ್ನಿವೇಶವಾಗಲಿ ಅವರಿಗೆ ಅವಮಾನವೆನ್ನಿಸಲೇ ಇಲ್ಲ, ಏಕೆಂದರೆ ಅವರು ಅದನ್ನ ಅವಮಾನವೆಂದುಕೊಳ್ಳಲೇ ಇಲ್ಲ. ನಾಣ್ಯಗಳಲ್ಲಿ ಅವರಿಗೆ ಕಂಡಿದ್ದು ಹಣ. ಚಪ್ಪಲ್ಲಿಯಲ್ಲಿ ಅವರಿಗೆ ಕಂಡದ್ದು ಬೆಳ್ಳಿ ಮತ್ತು ನಿಜಾಮನ ಚಪ್ಪಲಿಯೆಂಬ ವಿಷಯ ತರಬಹುದಾದ ಹಣ. Out-of-Box thinking ಮಾಡಲು ಆಗಷ್ಟೇ ಸಾಧ್ಯ. ಧ್ಯೇಯದ ಮುಂದೆ ಸ್ವಂತಿಕೆಯನ್ನ ಮರೆಯುವಷ್ಟು ಅರ್ಪಿತ ಮನೋಭಾವ. ತನ್ನನ್ನು ತಾನು ಗೆದ್ದ, ತನ್ನನ್ನು ತಾನು ಶೂನ್ಯವಾಗಿಸಿಕೊಂಡ ಮಹಾಪುರುಷರು ಅವರು.

ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಮಹಾದ್ವಾರ.
ವಿಶ್ವವಿದ್ಯಾನಿಲಯ ಕಟ್ಟಲು ಅವರು ಬೇಡಿ ಗಳಿಸಿದ್ದು ಆ ದಿನಗಳಲ್ಲೇ ಒಂದು ಕೋಟಿ ಮೂವ್ವತ್ತನಾಲ್ಕು ಲಕ್ಷ ರೂಪಾಯಿಗಳು, ಮತ್ತು “ಭಿಕ್ಷುಕರ ಚಕ್ರವರ್ತಿ” ಎಂಬ ಬಿರುದು, ಮಾಳವೀಯರ ಇಚ್ಚಾಶಕ್ತಿ ಮತ್ತು ಸಮರ್ಪಣೆಯನ್ನ ಕಂಡ ಗಾಂಧಿ ಹೇಳಿದ್ದು “ನನ್ನ ಹಿರಿಯಣ್ಣನಂತಹ ಮಾಳವೀಯರಿಂದ ನಾನು ಬೇಡುವುದನ್ನ ಕಲಿತೆ.”

ದಂತ ಕಥೆ ಸತ್ಯವೋ ಕಪೋಲಕಲ್ಪಿತವೋ, ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಲು ನಮ್ಮನ್ನು ನಾವು ಗೆಲ್ಲಬೇಕೆಂಬ ನೀತಿಯಂತೂ ಸುಂದರವಲ್ಲವೇ. ನೀವೇನಂತೀರಿ!!!