Monday 16 May 2011

ಮೃತ್ಯುಸ್ಪರ್ಶ ಜೀವನ್ಮುಖಿ....

(ಇದು ಕನಸಲ್ಲ, ದಿನಾಂಕ 31-5-2005 ಮತ್ತು 1-6-2005ರ ನಡುವಿನ ರಾತ್ರಿ ನಡೆದ ಸತ್ಯ ಘಟನೆ)



ಧಡ್... ಧಡ್....... ಧಡ್........

ರೈಲಿನ ಶಬ್ದ, ಯಾರೋ ಹೆಗಲು ಸವರಿದ ಅನುಭವ ..

ನಿದ್ದೆಯಿಂದ ಮೆಲ್ಲನೆ ಕಣ್ತೆರೆದು ನೋಡಿದೆ....

"
ಏಳು ಬಂಗಾರ... ಬೆಳಗಾಯ್ತು" ಅನ್ನೋ ಅಪ್ಪ ಅಲ್ಲ ಎಬ್ಬಿಸಿದ್ದು...

ರೈಲು

ಮೈಮೇಲೆ ಹರಿದು ಹೋಗ್ತಿರೋ ರೈಲು.............

ಅಯ್ಯೋ ದೇವರೆ, ಇದು ಹೇಗೆ ಸಾಧ್ಯ....

ನಾನ್ಯಾಕೆ ರೈಲ್ವೆ ಟ್ರ್ಯಾಕ್‍ನ ಒಳಗೆ ಬಿದ್ದಿದೀನಿ... ಸರಿ, ಏನಾದರೂ ಆಗಲಿ... ಇನ್ನೂ ಬದುಕಿದ್ದೀನಲ್ಲ...
ಬದುಕಬೇಕಲ್ಲ... ಬದುಕುವೆನಾ?!!


ಮೈಮೇಲೆ ಹರಿಯುವ ರೈಲಿನಡಿಯಲ್ಲಿ, ರೈಲಿನ ಬ್ಯಾಟರಿ ಬಾಕ್ಸ್, ಪೈಪ್ಸ್, ಬ್ರೇಕ್‍ಲೈನ್ಸ್ ಯಾವುದಕ್ಕೂ ಸಿಗದಂತೆ ಆಡಿಯ ಕಾಂಕ್ರೀಟ್ ಸ್ಲೀಪರ್ ಕಚ್ಚಿ ಮಲಗಿದೆ... ರೈಲು ಪೂರ್ಣ ನನ್ನ ದೇಹ ದಾಟುವವರೆಗೂ ಸಾವು ಬದುಕಿನ ನಡುವಿನ ಗೆರೆಯ ಮೇಲೆ, ಎತ್ತ ಬೀಳುವೆನೋ ನಾನರಿಯೆ.
ಮನದಲ್ಲೇ ದೈವವ ನೆನೆದೆ... ಬೇಡಿದೆ.... ದಯವಿಟ್ಟು ಕ್ರೂರ ಸಾವು ಕೊಡಬೇಡ... ರೈಲಿನ ಯಾವುದಾದರೂ ತಗಡೋ, ತಂತಿಯೋ, ಪೈಪೋ, ನನ್ನ ಬಟ್ಟೆಗೆ ಸಿಲುಕಿದರೆ ದರದರನೆ ಎಳೆದರೆ ಎಂಥಾ ಭೀಭತ್ಸ ಸಾವು, ಮುಗಿಸುವುದಾದರೆ ಒಂದೇ ಏಟಿಗೆ ನನ್ನ ಮುಗಿಸಬಾರದಿತ್ತೆ... ಪ್ರಭು ಇಲ್ಲಿಯವರೆಗೆ ಕಾಪಾಡಿದೆ. ಕೊನೆಯವರೆಗೂ ಕಾಪಾಡಿಬಿಡು. ಕಾಂಕ್ರೀಟ್ ಸ್ಲೀಪರ್‌ಗಳು ರೈಲಿನ ಚಲನೆಗೆ ತಕ್ಕಂತೆ ಏರಿಳಿಯುತ್ತಿದ್ದವು...  ಇದ್ದ ಭಯವೆಲ್ಲಾ ಕೊನೆಯ ಬೋಗಿಯ ಹಿಂದೆ ಬೋಗಿಗಳನ್ನು ಜಾಯಿಂಟ್ ಹಾಕಲು ಇರುವ ಕೊಕ್ಕೆಯ ಬಗ್ಗೆ...  ಅದು ನೇತಾಡುತ್ತಿರುತ್ತದೆ... ಬಹಳ ಕೆಳಮಟ್ಟದಲ್ಲಿ ನೇತಾಡುತ್ತಿರುತ್ತದೆ... ಅದಕ್ಕೆ ಮೈ, ಮೈಮೇಲಿರುವ ಬಟ್ಟೆ ಸಿಕ್ಕಿಕೊಂಡರೆ...........

ಸುಮಾರು ಮೂವತ್ತು ಸೆಕೆಂಡುಗಳು ಜೀವನ್ಮರಣದ ಮಧ್ಯದ ಸ್ಥಿತಿ, ರೈಲಿನ ಕೊನೆಯ ಬೋಗಿ ಕೂಡ ದಾಟಿ ಹೋಯಿತು... ನಾನು ಸುರಕ್ಷಿತವಾಗಿದ್ದೆ. ಅಲ್ಲಿಯವರೆಗೆ  ಬೆನ್ನು ಮೇಲಾಗಿ ಟ್ರ್ಯಾಕ್‍ನೊಳಗೆ ಮಲಗಿದ್ದ ನಾನು ಮೆಲ್ಲನೆ ಎದ್ದು ಕುಳಿತೆ... ಮಂಡಿಯ ತಬ್ಬಿ ಕುಳಿತೆ...ಮೇಲೆ ಹರಿದು ಹೋದ ಕೊನೆಯ ಬೋಗಿಯ "X" ಮಾರ್ಕು ಕಾಣುತ್ತಿತ್ತು.. ರೈಲು ನಿಧಾನವಾಗಿ ಹೋಗುತ್ತಿತ್ತು... ನಿಟ್ಟುಸಿರುಬಿಟ್ಟೆ... ಸಾವನ್ನ ಬಹಳ ಹತ್ತಿರದಿಂದ ಕಂಡಿದ್ದೆ... ಯೋಚಿಸತೊಡಗಿದೆ, ನಾ ಹೇಗೆ ಅಲ್ಲಿಗೆ ಬಂದೆ? ಯಾಕೆ ಬಂದೆ? ಎಲ್ಲಕ್ಕಿಂತ ಮೊದಲು "ನಾನು" ಯಾರು??? ನನ್ನ ನಾ ನೋಡಿಕೊಂಡೆ, ಹಾಕಿದ್ದ ಕೆನೆಬಣ್ಣದ ಕುರ್ತಾ ಟ್ರ್ಯಾಕ್ ಮೇಲೆ ಬೀಳುವ ಇಂಜಿನ್ ಎಣ್ಣೆ ಕುಡಿದಿದೆ... ರೈಲ್ವೆ ಟ್ರ್ಯಾಕ್ ಮೇಲಿನ ಜಲ್ಲಿ ಕಲ್ಲಿನ ಏಟಿಗೆ ಸ್ವಲ್ಪ ಹರಿದುಹೋಗಿದೆ,

ರೈಲು ಹರಿದು ಹೋಗುತ್ತಿರುವ ಕಡೆ ನೋಡಿದೆ.... ಸ್ವಲ್ಪ ದೂರದಲ್ಲಿ ರೈಲ್ವೆ ನಿಲ್ದಾಣವೊಂದರ ಫಲಕ ಕಂಡಿತ್ತು..

"ಹನಕೆರೆ". 

ಹೋ!!!! ನಾನು ಬಿದ್ದಿರುವುದು ಹನಕೆರೆ ಸ್ಟೇಷನ್ ಔಟರ್, ಮೈಸೂರಿನಿಂದ,
ಬೆಂಗಳೂರಿನೆಡೆಗೆ ಹೋಗುವ ಹಾದಿಯಲ್ಲಿ ಮಂಡ್ಯದ ನಂತರದ ಸ್ಟೇಷನ್,

ಹಾ! ನೆನಪಾಯ್ತು ನಾನು ಮೈಸೂರಿನಿಂದ ಹೊರಟದ್ದು, ಮಂಡ್ಯಕ್ಕೆ...

ರಾತ್ರಿ ಹೊರಡುವ ಕಾವೇರಿ ಎಕ್ಸ್‌ಪ್ರೆಸ್,

ಅರೆ, ನಿದ್ದೆ ಹೋದೆ ಅಲ್ಲವೇ...

ಮಂಡ್ಯ ಆಗತಾನೆ ದಾಟಿತ್ತು...

ಏನು ಮಾಡೋದು, ಹೋಗಲಿ ಮುಂದಿನ ಕ್ರಾಸಿಂಗ್‍ ಹನಕೆರೆಯಲ್ಲಿ ಆದರೆ ಕಾವೇರಿ ಇಂದ ಇಳಿದು ಪ್ಯಾಸೆಂಜರ್ ಹತ್ತಿ ವಾಪಸ್ ಮಂಡ್ಯಕ್ಕೆ ಬರೋದು...

ಪ್ಯಾಸೆಂಜರ್ ಟ್ರ್ರೈನೇ ಮೊದಲು ಹನಕೆರೆಗೆ ಬಂದಿದ್ದರೆ ಕಾವೇರಿ ನಿಲ್ಲುವುದಿಲ್ಲ...

ಮುಂದಿನ ಕಾವೇರಿ ನಿಲ್ಲುವ ಸ್ಟೇಷನ್ ಮದ್ದೂರಿನಲ್ಲಿಳಿದು, ಮಂಡ್ಯಕ್ಕೆ ಬಸ್ಸಿನಲ್ಲಿ ಬರುವುದು ಎಂದು ಕೊಂಡಿದ್ದೆ...

ಹನಕೆರೆ ಹತ್ತಿರ ಬಂದಾಗ ಲೂಪ್ ಲೈನ್ ಖಾಲಿ ನೋಡಿದೆ, ಅದರರ್ಥ ಪ್ಯಾಸಿಂಜರ್ ಬಂದಿಲ್ಲ, ಕಾವೇರಿಯೇ ಮೊದಲು, ಆದ್ದರಿಂದ ನಿಲ್ಲಿಸ್ತಾನೆ ಎಂದುಕೊಂಡು ಎದ್ದೆ... ಬಾಗಿಲ ಬಳಿ ಬಂದದ್ದಷ್ಟೆ ನೆನಪು.. ನಂತರದ ನೆನಪಿನ ಚಿತ್ರ ಅತಿವೇಗದ ರೈಲುಗಾಡಿ ನನ್ನ ಎಡಭಾಗದಲ್ಲಿ ಹೋಗುತ್ತಿದೆ, ನನ್ನ ದೇಹ ಗಾಳಿಯಲ್ಲಿ ತೇಲುತ್ತಿದೆ... (ಗಾಡಿಯ ಬಾಗಿಲು ಬಡಿದು ನನ್ನ ಆಚೆ ಬಿಸಾಕಿತ್ತೋ, ಅಥವಾ ಅತಿವೇಗದಲ್ಲಿದ್ದ ರೈಲಿನ  ತೂಗುಯ್ಯಾಲೆಯಲ್ಲಿ ಇನ್ನೂ ಆಧಾರಕ್ಕೆ ಏನೂ ಹಿಡಿಯುವ ಮೊದಲೇ ಸಮತೋಲನ ತಪ್ಪಿ ಆಚೆ ಬಿದ್ದಿದ್ದೆನೋ ನೆನಪಿಲ್ಲ. ಬಿದ್ದದ್ದು ಎಲ್ಲಿಗೆ, ಹೇಗೆ ಎಂಬುದೂ ನೆನಪಿಲ್ಲ, ರೈಲಿನಡಿ ಹೇಗೆ ತಲುಪಿದೆ ನೆನಪಿನಲ್ಲಿಲ್ಲ. ) ಮುಂದಿನ ನೆನಪು ರೈಲಿನಡಿಯ ಬ್ಯಾಟರಿ ಬಾಕ್ಸೋ ಏನೋ ಉಜ್ಜಿ ಎಚ್ಚರವಾಗಿದ್ದು.

ಅಬ್ಬಾ... ರೈಲಿನಿಂದ ಈಚೆ ಬಿದ್ದು ಅದೇ ರೈಲಿನಡಿ ಬಂದುಬಿಟ್ಟೆನಾ...!!!

ಹಾಗಾಗೂ ಬದುಕಿರುವೆನಾ..........??!!

ಹೇಗೆ ಸಾಧ್ಯ!?

ಚಕ್ರಗಳೇನು ನನ್ನ ದೇಹ ಟ್ರ್ಯಾಕಿನ ಒಳಗೆ ತೂರುವವರೆಗೂ ಸುಮ್ಮನಿದ್ದವಾ......??
ತಲೆ ಕೆಟ್ಟು ಹೋಯ್ತು... !!

ಏನಾದರೂ ಹಾಳಾಗಿ ಹೋಗಲಿ, ಆಗ ತಾನೇ ಅನುಭವಿಸಿದ ನನಗೇ ನಂಬಲಸಾಧ್ಯವಾದ ವಿಷಯಗಳು, ನೆನಪು ಮರುಕಳಿಸತೊಡಗಿತು, ನಾ ಯಾರು, ಏಕೆ ಬಂದೆ, ಹೇಗೆ ಬಿದ್ದೆ ಎಲ್ಲಾ, ಇನ್ನೂ ನಾನು ಸ್ಟೇಷನ್ ತಲುಪಿ, ಟಿಕೇಟ್ ತೆಗೆದು ಮಂಡ್ಯಕ್ಕೆ ಹೋಗಬೇಕು...

ಯಾಕೋ ಸುಸ್ತಾಗುತ್ತಿದೆ...

ಹೋದರಾಯ್ತು, ಇನ್ನೂ ಹಳಿಗಳ ಮಧ್ಯೆಯೇ ಕೂತಿದ್ದ ನನಗೆ ಎದ್ದು ಹೊರಡಲು ಶಕ್ತಿಯೇ ಸಾಲುತ್ತಿಲ್ಲಅಷ್ಟರಲ್ಲೇ ಲೂಪ್ ಲೈನಿನ ಟ್ರ್ಯಾಕ್‍ಶಿಫ್ಟರ್, ಚಲಿಸಿತು..

ಆ ಕ್ಷಣಕ್ಕೆ ಅನ್ನಿಸಿದ್ದು, ಅಂದರೆ ಇನ್ನೊಂದು ರೈಲು ವಿರುದ್ದ ದಿಕ್ಕಿನಿಂದ ಬರುತ್ತಿದೆಯೇ? ಅಯ್ಯೋ ಒಂದು ರೈಲಿನಿಂದ ತಪ್ಪಿಸಿಕೊಂಡೆ, ಮೊದಲು ಈ ಟ್ರ್ಯಾಕ್‍ನಿಂದ ಹೊರಗೆ ಹೋಗಿ ಕೂರಬೇಕು, ಅಲ್ಲಿಯೇ ಪಕ್ಕ ಬಿದ್ದಿದ್ದ ನನ್ನ ಬ್ಯಾಗ್ ತೆಗೆದುಕೊಂಡು ಓಡಿ ಹೋಗಿ ಪಕ್ಕದ ಗದ್ದೆ ಬದುವಿನ ಮೇಲೆ ಕೂತೆ.. ರೈಲೇನೂ ಬರಲಿಲ್ಲ... ಸಮಯ ಹತ್ತು ನಿಮಿಷ ಕಳೆದಿರಬೇಕುಇಬ್ಬರು ವ್ಯಕ್ತಿಗಳು ಸ್ಟೇಷನ್ ಮಾಸ್ಟರ್, ಮತ್ತು ಸ್ಟೇಷನ್‍ನ ರೈಲ್ವೆ ಪೋಲಿಸ್ ಕಾನ್ಸ್‌ಟೇಬಲ್ ರೈಲ್ವೇ ಹಳಿಗಳ ಮೇಲೆ ಏನೋ ಹುಡುಕುತ್ತಾ ಬಂದರುನನ್ನನ್ನೇ ಇರಬೇಕು ಅನಿಸಿತು... ಬಹುಶಃ ಕಾವೇರಿಯ ಗಾರ್ಡ್ ನಾನು ಬಿದ್ದಿದ್ದು ನೋಡಿರಬಹುದು, ಸುದ್ದಿ ಮುಟ್ಟಿಸಿರಬೇಕು. ನಾನವರನ್ನ ಕೂಗಿದೆ. ನನ್ನೆಡೆಗೆ ನೋಡಿದ ಅವರು ಬಂದರು, ಸ್ಟೇಷನ್ ಮಾಸ್ಟರ್ ಏನೂ ಮಾತಾಡಲೇ ಇಲ್ಲ, ಸುಮ್ಮನೆ ತಮ್ಮ ಕೈಗೆ ನನ್ನ ಬ್ಯಾಗ್ ತೆಗೆದುಕೊಂಡರು

ಪೋಲೀಸ್: ನಡೆಯಲಾಗುತ್ತದೆಯೇ?

ನಾನು: ಆಗುತ್ತದೆ.... I am OK. (ಆದರೂ ಅವರು ನನ್ನನ್ನು ಹಿಡಿದುಕೊಂಡರು ಅವರ ಜೊತೆ ಸ್ಟೇಷನ್ ಕಡೆ ಹೆಜ್ಜೆ ಹಾಕಿದೆ)

ಅವರೇನೂ ಕೇಳಲಿಲ್ಲ.... ನಾನೇ ಕೇಳಿದೆ, ನನಗರ್ಥವಾಗದ ವಿಷಯ, ನನಗೆ ತಲೆಕೆಡಿಸಿರುವ ವಿಷಯ,

ನಾನು: ಸರ್, ನಾನು ರೈಲಿನಿಂದ ಬಿದ್ದೆ, ಅದೇ ರೈಲಿನಡಿಗೆ ಬಂದೆ, ಹಾಗಾದರೆ ಹೇಗೆ ಬದುಕಿದ್ದೇನೆ ಅರ್ಥವಾಗುತ್ತಿಲ್ಲ, ಇದು ಹೇಗೆ ಸಾಧ್ಯ....?!

ಪೋಲೀಸ್: (ಅವರ ಧ್ವನಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಪಟ್ಟು ವಿಫಲನಾದವರೊಡನೆ ಮಾತನಾಡುತ್ತಿರುವಂತಿತ್ತು.) ಇಲ್ಲಿಗೆ ಹೇಗೆ ಬಂದಿರಿ...

ನಾನು: ಕಾವೇರಿ ಎಕ್ಸ್‌ಪ್ರೆಸ್, ಮಂಡ್ಯದಲ್ಲಿ ಇಳಿಯಬೇಕಿತ್ತು. ನಿದ್ದೆ ಮಾಡಿಬಿಟ್ಟಿದ್ದೆ, ಕಣ್ಣು ಬಿಟ್ಟಾಗ ಮಂಡ್ಯ ದಾಟಿಬಿಟ್ಟಿತ್ತು ಗಾಡಿ, ಇಲ್ಲಿನ ಕ್ರಾಸಿಂಗ್ ಕೊಡುವ ಪ್ಯಾಸಿಂಜರ್‌ನಲ್ಲಿ ವಾಪಸ್ ಹೋಗೋಣ ಅಂದುಕೊಂಡೆ, ಹನಕೆರೆ ಲೂಪ್ ಲೈನ್ ಖಾಲಿ ಕಾಣಿಸಿತು, ಗಾಡಿ ಇನ್ನೇನು ಸ್ಟೇಷನ್‍ನಲ್ಲಿ ನಿಲ್ಲುತ್ತೆ ಎಂದು ಬ್ಯಾಗ್ ತೆಗೆದುಕೊಂಡು ಬಾಗಿಲಿನತ್ತ ಹೊರಟೆ,

ಪೋಲೀಸ್: ಬಾಗಿಲು ಹೊಡೆದು ಆಚೆ ಬಿದ್ದಿರಾ?

ನಾನು: ಹೌದು! (ಹಾಗೆ ಇರಬಹುದು, ಮತ್ತೇನೂ ಅವರು ಕೇಳಲಿಲ್ಲ.. ನಾನೇ ಮುಂದುವರಿಸಿ ಕೇಳಿದೆ) ಆದರೆ ನಾನು ಹೇಗೆ ಬದುಕಿದ್ದೇನೇ ಸರ್. ನನಗರ್ಥವಾಗುತ್ತಿಲ್ಲ... ರೈಲಿನಿಂದ ಬಿದ್ದು, ಅದೇ ರೈಲಿನಡಿ ಹೋಗಿ, ಬದುಕಲು ಹೇಗೆ ಸಾಧ್ಯ...

ಪೋಲೀಸ್: ಇಲ್ಲ, ಅದು ಹಾಗಾಗಿಲ್ಲ... ನೀವು ಬಿದ್ದ ರೈಲಲ್ಲ ನಿಮ್ಮ ಮೇಲೆ ಹೋಗಿದ್ದು. ಕಾವೇರಿ ಹೋಗಿ ೩ ಗಂಟೆಗಳ ಮೇಲಾಗಿದೆ, ಇದು ಮೈಸೂರು-ಬೆಂಗಳೂರು ಮಿಡ್‍ನೈಟ್ ಪ್ಯಾಸೆಂಜರ್, ಕಾವೇರಿ ರಾತ್ರಿ ೯.೪೫ರಲ್ಲಿ ಮೆಯಿನ್‍ಲೈನ್‍ನಲ್ಲಿ ಹೋಯಿತು. ನೀವದರಿಂದ ಬಿದ್ದಾಗ ಪಕ್ಕದ ಲೂಪ್‍ಲೈನ್ ಒಳಗೆ ಬಿದ್ದಿದ್ದೀರಿ. ಈಗ ರಾತ್ರಿ ೧ ಗಂಟೆ..

ನನಗೆ ಸ್ವಲ್ಪ ಅರ್ಥವಾಯಿತು. ನಾನು ೩ ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಲೂಪ್‌ಲೈನೊಳಗೆ ಬಿದ್ದಿದ್ದೆ. ನನ್ನ ಮೇಲೆ ಬೇರೊಂದು ರೈಲು ಹೋದಾಗ ಅದರ ಕೌಕ್ಯಾಚರೋ, ಬ್ಯಾಟರಿ ಬಾಕ್ಸೋ ಏನೋ ಉಜ್ಜಿದಾಗ ನನಗೆ ಪ್ರಜ್ಞೆ ಮರುಕಳಿಸಿದೆ. ಆ ೩೦ ಸೆಕೆಂಡ್ ಜೀವನ್ಮರಣದ ಮಧ್ಯೆ ಇದ್ದು ಜೀವಂತವಾಗಿ ಎದ್ದು ಬಂದಿದ್ದೇನೆ.. ಅದೂ ಸಿಂಗಲ್ ಪೀಸ್‍ನಲ್ಲಿ. ಆದರೂ ನನಗೇನೂ ಅನ್ನಿಸುತ್ತಿಲ್ಲ.  ಏನೋ ಆದದ್ದು ಆಯ್ತು, ಈಗ ಮನೆ ಸೇರಿ ಮಲಗಬೇಕು, ಮನೆಯಲ್ಲಿ ಎಷ್ಟು ಕಾದಿದ್ದಾರೋ ಏನೋ.

ಸ್ಟೇಷನ್ ತಲುಪಿದ ನಂತರ ಕೇಳಿದೆ,  "ಮಂಡ್ಯಕ್ಕೆ ಮುಂದಿನ ರೈಲು ಬೆಳಿಗ್ಗೆ ೭ ಗಂಟೆಗಲ್ಲವೇ? ಒಂದು ಟಿಕೇಟ್ ಕೊಟ್ಟುಬಿಡಿ, ಸ್ಟೇಷನ್‍ನಲ್ಲೇ ಇದ್ದು ಬೆಳ್ಳಿಗ್ಗೆ ಹೊರಡುತ್ತೇನೆ..."

ಪೋಲೀಸ್: ಆ ಚಿಂತೆ ಬೇಡ, ನಾವು ನಿಮ್ಮ ನ್ನ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ.

ನಾನು ಬೆಚ್ಚಿಬಿದ್ದೆ. ಆಟೋ ತಂದಿರಬೇಕು? ಯಾವಾಗ? ಅಷ್ಟುದೂರ ಆಟೋದಲ್ಲಿ ಹೋದರೆ ಖರ್ಚು ಎಷ್ಟುಗುತ್ತೆಬೇಡಪ್ಪಾ! ಈಗೆನಾಯ್ತು, ರೈಲಿನಿಂದ ಬಿದ್ದು, ಮೃತ್ಯುಸ್ಪರ್ಶ ದಾಟಿ ಬಂದಿರುವೆ, ಹಾಗಂತ ಹಿಗ್ಗಾಮುಗ್ಗಾ ಖರ್ಚು ಮಾಡಲು ಸಾಧ್ಯವೇ. ಅವರು ನನ್ನ ವಿಳಾಸ ಕೇಳಿದರು, ಕೊಟ್ಟೆ,
ಫೋನ್ ನಂಬರ್?

ಮನೆಯಲ್ಲಿ ಫೋನ್ ಇರಲಿಲ್ಲ. ಚಿಕ್ಕಪ್ಪನ ಮನೆಯ ನಂಬರ್ ಕೊಟ್ಟೆ..
 
ಅಲ್ಲಿ ಆಗಲೇ ಮತ್ತಿಬ್ಬರು ಪೋಲಿಸ್ ಕೂತಿದ್ದರು.. ನನ್ನ ಕರೆದುಕೊಂಡು ಹೋಗಲು ಆ ಪೋಲಿಸರಿಗೆ ಸ್ಟೇಷನ್ ಮಾಸ್ಟರ್ ಹೇಳಿದರು. ಹೊರಗೆ ನಿಂತಿದ್ದ ಜೀಪ್ ಹತ್ತಲು ಹೇಳಿದರು.. ಸ್ವಲ್ಪ ಸಮಾಧಾನ ಆಯ್ತು... ಆಟೋ ಅಲ್ವಲ್ಲ.. ಪೋಲೀಸ್ ಜೀಪ್ ತಾನೆ, ಖರ್ಚಿಲ್ಲ..  ಆದರೂ ಪೋಲಿಸರ ಸಹವಾಸ, ತಕ್ಷಣ ನನ್ನ ಅಣ್ಣ (ದೊಡ್ಡಪ್ಪನ ಮಗ) ಪೋಲೀಸ್‍ನಲ್ಲಿರುವುದು ನೆನಪಾಯ್ತು. ಧೈರ್ಯವಾಯ್ತು, ಅವರಿಗೂ ಹೇಳಿದೆ. ತಕ್ಷಣ ಕೈಲಿದ್ದ ವೈರ್‌ಲೆಸ್‍ನಿಂದ ಕಂಟ್ರೋಲ್ ರೂಮ್‍ಗೆ  ಹೇಳಿ ನನ್ನಣ್ಣ ಎಲ್ಲಿದ್ದರೂ ಲೊಕೇಟ್ ಮಾಡಿ ವಿಷಯ ತಿಳಿಸುವಂತೆ ಹೇಳಿದರು. ಮಂಡ್ಯಕ್ಕೆ ಜೀಪ್ ಬರುತ್ತಿದ್ದಂತೆ, ಮಂಡ್ಯ ಜಿಲ್ಲಾ ಆಸ್ಪತ್ರೆಯೊಳಗೆ ಜೀಪ್ ನುಗ್ಗಿತು. ಅಯ್ಯೋ ಏನೂ ಬೇಡ, ದಯವಿಟ್ಟು ನನ್ನ ಮನೆ ತಲುಪಿಸಿ ಬಿಡಿ ಎಂದೆ, ಅವರು ಏನಿಲ್ಲ ಬರಿ ಪ್ರಥಮ ಚಿಕಿತ್ಸೆ ಅಷ್ಟೇ, ಯೋಚಿಸಬೇಡ ಅಂದರು, ನನಗೆ ಪ್ರಜ್ಞೆ ತಪ್ಪಿತ್ತು, (ಬಿದ್ದಾಗ ನನ್ನ ಮುಖ ಜಲ್ಲಿಕಲ್ಲು ಸ್ಲೀಪರ್‌ಗೆ ಬಡಿದು, ಹರಿದು ಹೋಗಿ, ರಕ್ತಸಿಕ್ತವಾಗಿ, ವಿಕಾರವಾಗಿತ್ತು, ನನಗೆ ಗೊತ್ತಿರಲಿಲ್ಲ ಆಷ್ಟೇ. , ಸಾಕಷ್ಟು ರಕ್ತ ಕಳೆದುಕೊಂಡಿದ್ದೆ.) ಮತ್ತೆ ಒಂದೆರಡು ಕ್ಷಣದ ನೆನಪೆಂದರೆ ಆ ರಾತ್ರಿ ನನ್ನ ಹರಿದು ಹೋದ ಮುಖಕ್ಕೆ ಅಲ್ಲಿನ ಸರ್ಜನ್ ಹೊಲಿಗೆ ಹಾಕುತ್ತಿದ್ದರು, ಮತ್ತೆ ನಾನು ಎಚ್ಚರವಾದಾಗ ಬೆಳಿಗ್ಗೆ ೧೧ ದಾಟಿತ್ತು. ನನ್ನನ್ನು ವಾರ್ಡ್‍ಗೆ ಹಾಕಿದ್ದರು. ಅಮ್ಮ, ತಮ್ಮ, ಬಂಧು ಮಿತ್ರರು ಬಂದಿದ್ದರು. ಹೊಲಿಗೆ ಹಾಕಿದ ತುಟಿ, ಗದ್ದ, ಹುಬ್ಬು, ೩ ಕೈಬೆರಳುಗಳ ಮೂಳೆ ಮುರಿದಿತ್ತು. ೯ ದಿನ ಆಸ್ಪತ್ರೆಯಲ್ಲಿದ್ದು ಮನೆಗೆ ಮರಳಿದೆ..

ನಾನು ನಡೆದ ಘಟನೆಯನ್ನ ಹೇಳಿದರೆ ಆಸ್ಪತ್ರೆಯಲ್ಲಿ ಯಾರೂ ನಂಬುತ್ತಿರಲಿಲ್ಲ. ಪೋಲೀಸ್ ನನ್ನ ಹೇಳಿಕೆ ತೆಗೆದುಕೊಳ್ಳಲು ಬಂದಾಗ ನಾನವರನ್ನ ಕೇಳಿದೆ,
"ಸರ್, ನನಗೆ ಫೈನ್ ಹಾಕ್ತೀರಾ!"
"ಎಂತಹಾ ಫೈನ್?!"
"ನನಗೆ ಪಾಸ್ ಇದ್ದದ್ದು, ಮೈಸೂರು, ಮಂಡ್ಯ ನಡುವೆ, ನಾನು ಬಿದ್ದಿದ್ದು, ಮಂಡ್ಯ ದಾಟಿದ ನಂತರ, ಟಿಕೇಟು ರಹಿತ ಪ್ರಯಾಣ ಅಂತಾ ಫೈನ್ ಹಾಕ್ತೀರಾ!"
"ಆಯ್ಯೋ, ಮೃತ್ಯುವೇ ಬಿಟ್ಟು ಕಳಿಸಿರುವಾಗ ನಾವು ಹಾಕೋ ಫೈನ್ ಏನ್ ಬಂತು. ಫೈನ್ ಹಾಕೋಕೆ ಬರಲಿಲ್ಲ  ನಾವು ಬಂದಿದ್ದು ಸ್ಟೇಟ್‍ಮೆಂಟ್ ತಗೋಳೋಕೆ, ಇದೊಂದು ನಾವು ಪಾಲಿಸಬೇಕಾದ ಪ್ರೊಸಿಜರ್ನನ್ನ ೨೮ ವರ್ಷ ಸರ್ವೀಸ್ನಲ್ಲಿ ಬಹಳಷ್ಟು ಬಾಗಿಲಿನಿಂದ ಬಿದ್ದ ಕೇಸ್ ನೋಡಿದಿನಿ, ಯಾರೂ ಬದುಕಿಲ್ಲ, ಅಂತಹದರಲ್ಲಿ ರೈಲಿನಿಂದ ಬಿದ್ದು ಉಳಿದದ್ದಲ್ಲದೆ, ಇನ್ನೊಂದು ರೈಲಿನಡಿ ಬಂದೂ ಯಾವ ಅಂಗವೈಕಲ್ಯವೂ ಆಗದೆ ಉಳಿದಿರೊದು ಅಂದ್ರೆ ಬಹಳ ಗಟ್ಟಿಜೀವ".

ನನ್ನ ಮಾತು ನಂಬದಿದ್ದ ಜನ ರೈಲ್ವೇ ಪೋಲೀಸ್‍ನವರು ಹೇಳಿದ ವಿವರ ಕೇಳಿದ ಮೇಲೆ ನಂಬಿದರು, ನನಗೂ ಗೊತ್ತಿರದಿದ್ದ ರೈಲ್ವೇ ಪೋಲಿಸ್ ವರ್ಶನ್ ಹೀಗಿತ್ತು;
ಮಿಡ್‍ನೈಟ್ ಪ್ಯಾಸೆಂಜರ್ ಟ್ರೈನ್ ಲೂಪ್‍ಲೈನಿಗೆ ಶೆಡ್ಯೂಲ್ ಆದಾಗ ಅದರ ಚಾಲಕ ಹೆಡ್‍ಲೈಟ್ ಬೆಳಕಿನಲ್ಲಿ ನನ್ನ ದೇಹ ನೋಡಿ, ವೈರ್‌‍ಲೆಸ್‍ (ವಾಕಿಟಾಕಿ) ಮುಖಾಂತರ "ಟ್ರ್ಯಾಕ್‍ನಲ್ಲಿ ಯಾವುದೋ ಬಾಡಿ ಬಿದ್ದಿದ್ದೆ, ಯಾರೋ ಆತ್ಮಹತ್ಯೆ ಮಾಡಿಕೊಂಡಿರಬೇಕು, ಈಗ ಗಾಡಿ ಅದರ ಮೇಲೆ ಹರಿಯುತ್ತದೆ, ತೆಗೆಸಿಬಿಡಿ" ಎಂದು ಸಂದೇಶ ಕೊಟ್ಟಿದ್ದ... ಹನಕೆರೆ ರೈಲ್ವೇ ಸ್ಟೇಷನ್‍ನವರು ಮಂಡ್ಯ ಗ್ರಾಮಾಂತರ ಪೋಲೀಸ್‍ಗೆ 'ಬಾಡಿ' ಎಂದೇ ಮಾಹಿತಿ ಕೊಟ್ಟು ಕರೆಸಿದರು, ಮಂಡ್ಯ ಪೋಲೀಸ್ ಜೀಪ್ ಬರುವುದರೊಳಗೆ 'ಬಾಡಿ ಹುಡುಕೋಣ' ಎಂದು ಹೊರಟವರಿಗೆ ಜೀವಂತವಾಗೇ ನಾನು ಸಿಕ್ಕಿದ್ದೆ.

ಅಲ್ಲಿಯವರೆಗೂ ಲವ್ ಫೆಲ್ಯೂರ್ ಅಂತೆ, ಅದಕ್ಕೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದಂತೆ, ಎಂಬ ಅಂತೆ ಕಂತೆಗಳನ್ನು ಮಾತಾಡುತ್ತಿದವರ ಬಾಯಿಗೆ ಬೀಗ ಬಿತ್ತು.. (ಒಮ್ಮೊಮ್ಮೆ ಅನಿಸುತ್ತದೆ, ಒಂದು ವೇಳೆ ನಾನು ಸತ್ತಿದ್ದರೆ ನಿಜವಾಗಿ ನಡೆದ್ದದ್ದು ಹೇಳಲು ಯಾರೂ ಇಲ್ಲ.. ಕಥೆಗಳೇ ನಿಜವಾಗುತ್ತಿತ್ತು. ನನ್ನ ತಂದೆ ತಾಯಿ ಏನೆಂದು ಕೊಳ್ಳುತ್ತಿದ್ದರೋ.)

ಈ ಘಟನೆ ನನ್ನ ಜೀವನದ ದೃಷ್ಠಿಕೋನವನ್ನೆ ಬದಲಾಯಿಸಿಬಿಟ್ಟಿತು, ಚೆಲ್ಲು ಚೆಲ್ಲು ತುಂಟಾಟದ ನಾನು ವಿರಾಗಿಯಂತೆ ಮಾತಾಡುತ್ತಿದ್ದೆ. ಯಾವುದಕ್ಕೂ ಹೆದರಿಕೆ ಎಂಬುದೇ ಇರಲಿಲ್ಲ. ಸಾವೆಂಬುದು ಭಯ ಪಡುವ ವಿಷಯವೆಂದು ಅನಿಸಲೇ ಇಲ್ಲ. ಈಗಲೂ ಅನಿಸುವುದಿಲ್ಲ. ಮೃತ್ಯುಸ್ಪರ್ಶದ ನಂತರ ಪ್ರತಿಯೊಂದು ವಿಷಯ, ವಸ್ತು, ಘಟನೆಯನ್ನ ನಾನು ಸತ್ತುಹೋಗಿದ್ದರೆ ಹೇಗೆ ನಡೆದಿರುತ್ತಿತ್ತು ಎಂದು ಕಲ್ಪಿಸೇ ನೋಡುತ್ತಿದ್ದೆ. ಅದು ಸುಮ್ಮನೆ ಕಲ್ಪಿಸಿಕೊಳ್ಳಲಾರದ ಸಂಗತಿ. ನನ್ನ ಬೆಲೆ ನನಗೆ ತಿಳಿಯಿತು, ಹೆತ್ತು ಬೆಳೆಸಿದವರನ್ನ ಬಿಟ್ಟರೆ ಮಿಕ್ಕೆಲ್ಲರಿಗೂ ನಾನೊಂದು ಕಥೆ ಅಷ್ಟೆ. ನನ್ನ ಬಂಧು ಭಾಂಧವರಿಗೆ ನನ್ನ ಬದುಕು ಎಷ್ಟು ಮುಖ್ಯ(ವಲ್ಲ) ಎಂದು ಪ್ರತ್ಯಕ್ಷ ನೋಡಿಬಿಟ್ಟೆ, ತುಟಿ ಅನುಕಂಪಕ್ಕೆ, ಶಿಷ್ಟಾಚಾರಕ್ಕೆ, ದಾಕ್ಷಿಣ್ಯಕ್ಕೆ, ಆಸ್ಪತ್ರೆಗೆ ಬಂದು ಹೋಗುತ್ತಿದ್ದವರನ್ನ ನೋಡಿದೆ, ಆಸ್ಪತ್ರೆಗೆಂದೂ ಬಾರದೆ, ಘಟನೆಯ ಎಷ್ಟೋ ದಿನದ ಮೇಲೆ ಸಿಕ್ಕ, ಆದರೆ ಹೃದಯದಲ್ಲಿ ಅಷ್ಟೇ ಪ್ರೀತಿಯಿದ್ದ ಆತ್ಮೀಯರನ್ನ ಕಂಡೆ. ನನ್ನನ್ನ ನಾನು ಬಹಳ ಅತಿ-ಅಂದಾಜು (Over Estimate)  ಮಾಡಿಕೊಂಡಿದ್ದೆ ಎಂಬ ಅರಿವು ಬಹಳ ಬೇಗ ನನಗಾಯ್ತು.

ಆ ದಿನಗಳಲ್ಲಿ ನಾನೇನು ಸಂಪಾದಿಸುತ್ತಿರಲಿಲ್ಲ. ಯಾರ ಬದುಕೂ ನನ್ನ ಬದುಕಿನ ಮೇಲೆ ಅವಲಂಬಿಸಿರಲಿಲ್ಲ. ಹೀಗಿದ್ದೂ ತಂದೆ ತಾಯಿಗೆ ಮಕ್ಕಳ ಮೇಲಿನ ಭಾವನಾತ್ಮಕ ಸಂಬಂಧದ ಆಳದ ಪರಿಚಯ ನನಗಾಯ್ತು. ಆರ್ಥಿಕ ಅವಲಂಬನೆಯೇ ಬದುಕಿನ ಗುಣಮಟ್ಟವನ್ನ ನಿರ್ಧರಿಸುವುದಿಲ್ಲ ಭಾವನಾತ್ಮಕ ಅವಲಂಬನೆ (Emotional Dependency) ಕೂಡ ಬದುಕಿನಲ್ಲಿ ಅದರದೇ ಆದ ಬಹುಮುಖ್ಯ ಆಯಾಮವನ್ನ ಹೊಂದಿದೆ ಎಂದರ್ಥವಾಯ್ತು. ಹರಕೆ ಹೊತ್ತು, ದೈವವ ಕಾಡಿ ಬೇಡಿ, ಮದುವೆಯಾದ ೧೨ ವರ್ಷಗಳ ಮೇಲೆ, ಪಡೆದ ಮಗು ನಾನು. ಅಮ್ಮ ಅಂದಿನಿಂದ ಸೋಮವಾರ ಉಪವಾಸ ಮಾಡುವೆನೆಂದು ನಿರ್ಧರಿಸಿದರು. ದೈವಕ್ಕೆ ನಮಿಸಿದರು,

ಘಟನೆ ನಡೆದು ಬಹಳ ದಿನಗಳವರೆಗೂ ಅಪ್ಪ ಬೀರುವಿನಲ್ಲಿ ಏನಾದರೂ ಹುಡುಕಲು ಹೊರಟರೆ, ನನ್ನ ಅಂಕಪಟ್ಟಿಗಳು, ಪ್ರಮಾಣಪತ್ರಗಳು, ನನ್ನ ಭಾವಚಿತ್ರಗಳು, ನನ್ನ ಚಿಕ್ಕವಯಸ್ಸಿನ ಚಂದದ ಬಟ್ಟೆಗಳು ಏನಾದರೂ ಕೈಗೆ ಸಿಗುತ್ತಿದ್ದವು. ನಾನಾಗ ಪಕ್ಕದಲ್ಲೇ ಇದ್ದರೆ ನನಗೆ ಅನಿಸುತ್ತಿತ್ತು, ಒಂದು ವೇಳೆ ನಾನು ಈಗ ಬದುಕಿರದಿದ್ದರೆ, ಹೀಗೆ ಇವು ಕೈಗೆ ಸಿಕ್ಕಾಗ ಆ ಮನ ಎಷ್ಟು ನೋಯಬಹುದು ಎಂದು, ನನ್ನ ನಾನು ಅಪ್ಪನ ಜಾಗದಲ್ಲಿ ಕಲ್ಪಿಸಿಕೊಂಡು ನಡುಗಿ ಹೋಗುತ್ತಿದ್ದೆ. ಒಮ್ಮೆ ಅಪ್ಪನಿಗೆ ಹೇಳಿಯೂ ಬಿಟ್ಟೆ,
ಅಪ್ಪ ಹೇಳಿದರು, ಅಂತಹ ದೃಶ್ಯಾವಳಿಗಳನ್ನೆಲ್ಲ ಯೋಚಿಸಬೇಡ, ಏಕೆಂದರೆ ನಾನೂ ಉಳಿದಿರುತ್ತಿರಲ್ಲಿಲ್ಲ.. ನನ್ನ ಹಿಂದೆ ನಿನ್ನಮ್ಮನೂ ಉಳಿದಿರುತ್ತಿರಲ್ಲಿಲ್ಲ..

ಅದು ಸತ್ಯ...ನಿಷ್ಠುರ ಸತ್ಯ ಹೇಳುವಾಗಿನ ನಿರ್ಲಿಪ್ತ, ವಿರಾಗಿ ಕಣ್ಣ ನೋಟ ಅವರಲ್ಲಿತ್ತು. ನನ್ನ ಮೇಲಿದ್ದ ಅವರ ಭಾವನಾತ್ಮಕ ಅವಲಂಬನೆಗೆ ಹೇಗೆ ಪ್ರತಿಕ್ರಿಯಿಸಬೇಕೊ ಗೊತ್ತಾಗಲೇ ಇಲ್ಲ. ಸಾವಿನ ದವಡೆಯಿಂದ ನನ್ನನ್ನವರು ನಂಬಲಸದಳ ರೀತಿಯಲ್ಲಿ ಪಡೆದಿದ್ದರು.

ಬಹುಶಃ ನನ್ನ ಅಪ್ಪ ಅಮ್ಮ ಉಳಿಯುತ್ತಿರಲಿಲ್ಲ. ತಮ್ಮ ಪರದೇಶಿಯಾಗುತ್ತಿದ್ದ..

ಮೊದಲೆಲ್ಲಾ ಸಾವಿನ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದೆ, ಅದೊಂದು ಜೀವನದ ಘಟ್ಟ ಅಷ್ಟೇ (ಅಂತಿಮ ಘಟ್ಟ) ಎಂದು ಉಡಾಫೆ ಮಾಡುತ್ತಿದ್ದೆ.  ನಾನು ಅಲ್ಪಾಯು ಎಂದು ಹೇಳಿಕೊಳ್ಳುತ್ತಿದ್ದೆ, ನಾನು ಬದುಕೋದು ಕೇವಲ ಇಷ್ಟೇ ವರ್ಷ ಎಂದು ಹೇಳಿಕೊಳ್ಳುತ್ತಿದ್ದೆ  ನನ್ನ ಸಾವಿನ ದಿನವನ್ನೂ ಹೇಳುತ್ತಿದ್ದೆ.  (ನನಗೇಕೆ ಹಾಗನಿಸಿತೋ ಗೊತ್ತಿಲ್ಲ, ನಾನು ಬಹಳ ವರ್ಷ ಹಾಗೇ ಅಂದುಕೊಂಡಿದ್ದೆ, ಈಗ ನೆನೆಸಿಕೊಂಡರೆ ನನಗೆ ನಾನೆಷ್ಟು ಬಾಲಿಶ ಎನಿಸುತ್ತದೆ.) ಮೃತ್ಯುಸ್ಪರ್ಶದ ನಂತರ ಸಾವು ಹಗುರವಲ್ಲ, ಕ್ರೂರವೂ ಅಲ್ಲ, ಜೀವನದ ಮೇಲೆ ಪ್ರೀತಿ ತಂದು ಕೊಟ್ಟ, ಜೀವನವನ್ನ ನೋಡೋ ವಿಧಾನ ಕಲಿಸಿದ ಗುರು ಎನಿಸುತ್ತೆ.  ಕೋಟಿ ಕೊಟ್ಟರೂ ಸಿಗದ ಅನುಭೂತಿ ಮೃತ್ಯುಸ್ಪರ್ಶ, ಅದನ್ನ ಪ್ಲಾನ್ ಮಾಡಿ ಪಡೆಯಲಾಗುವುದಿಲ್ಲ, ನಮ್ಮ ನಿಜದ ಬೆಲೆಯನ್ನ ಅದು ತಿಳಿಸುತ್ತೆ. ನಮ್ಮವರು ಮತ್ತು ಪರರ ನಡುವಿನ ಅಂತರ ತೋರಿಸುತ್ತೆ..  ನಮ್ಮ ನಿಜವಾದ ಬೆಲೆ ತಿಳಿಯುವುದು ಜೀವನದ ದುರ್ಲಭ ಆದರೆ ಅಷ್ಟೇ ಸುಂದರ ಅನುಭವ (ಈ ಮಾತು ನಂಬುವುದು ಕಷ್ಟ ಎಂದು ಬಲ್ಲೆ, ಅದರೆ Its a fact that I felt). ಮೃತ್ಯುಸ್ಪರ್ಶಿಗೆ ಸಾವಿನ ಭಯವೆಂದೂ ಇರುವುದಿಲ್ಲ. (ಜೀವನದ ಭಯಗಳದ್ದು ಬೇರೆ ವಿಷಯ ಬಿಡಿ), ಅದು ಜೀವನದ ಆಸೆ ತುಂಬಿ ವೈರಾಗ್ಯವನ್ನೂ ತುಂಬುತ್ತದೆ.. ನಮ್ಮ ಸಾಧನೆಗಳೆಲ್ಲಾ ಶೂನ್ಯ ಎನ್ನುವ ಭಾವ ತುಂಬುತ್ತದೆ.. ಮುಂದಿನ ಬದುಕನ್ನ ಚಂದದಲ್ಲಿ, ಜನ ನೆನೆಯುವಂತೆ ಕಳೆಯಬೇಕು ಎನಿಸಿಬಿಡುತ್ತದೆ... ಸಾಧನೆಗಳ ಮೇಲೆಂದೂ ಅಹಂಭಾವ ಬರುವುದೇ ಇಲ್ಲ...  ನಮಗೇ ತಿಳಿಯದೇ ನಮ್ಮಲ್ಲಿ ಇದ್ದಿರಬಹುದಾದ ಕೊಬ್ಬೆಲ್ಲಾ ಇಳಿದು ಹೋಗುತ್ತದೆ.. ಬಹಳಷ್ಟನ್ನ ಪದಗಳಲ್ಲಿ ಹೇಳಲಾರೆವು, ಮೃತ್ಯುಸ್ಪರ್ಶದನುಭವವೂ  (ಸ್ಪರ್ಶವಲ್ಲ. ಅದರ ಅನುಭವ.) ಪದಗಳಲ್ಲಿ ಸಂಪೂರ್ಣವಾಗಿ ಹೇಳಲಾರದ ಬದುಕಿನ ಬೆಲೆ ತಿಳಿಸುವ ಅನುಭವ.

ಇದರ ನಂತರ ಜೀವನದ ದಿಕ್ಕು ಬದಲಾಯ್ತು. ಅಂಕಪಟ್ಟಿಗಳ ಅನುಸಾರ ನಾನು ಅಕಾಡಮಿಕ್ ಸ್ಕೋರರ್ ಅಲ್ಲ. ಸ್ನಾತಕೋತ್ತರ ಪದವಿಯ ಪ್ರವೇಶಕ್ಕೆ ಕನಸು ಕಾಣಲಿಕ್ಕೂ ಅಯೋಗ್ಯವಾದ ಅಂಕಪಟ್ಟಿಗಳನ್ನ ಇಟ್ಟುಕೊಂಡಿದ್ದ ನನಗೆ ಆ ಪದವಿ ಪ್ರಥಮ ದರ್ಜೆಯಲ್ಲಿ ಒಲಿದು ಬಂತು.  ಬಯಸಿದ ಸ್ಥಳದಲ್ಲೇ, ಬಯಸಿದ ಸಂಬಳದ ಎರಡರಷ್ಟು ಸಂಬಳದ ಕೆಲಸ. ದೈವವಾಣಿಯೆಂದು ನಾನು ನಂಬುವ (ಅಂತರ್ವಾಣಿಯೆಂದು ಕೆಲವರು ಹೇಳುವ) ಸಂಭಾಷಣೆಗಳು, ಪ್ರೀತಿಸುವ ಜನ. ಜೀವನದಲ್ಲಿ ಹೆಜ್ಜೆಗುರುತು ಮೂಡಿಸಲು ಬೇಕಾದಷ್ಟು ಅವಕಾಶ ಎಲ್ಲವೂ ಸಿಕ್ಕಿತು...


ಆದರೆ  "ಜೀವನ ಇನ್ನು ನಿನ್ನದಲ್ಲ, ನನ್ನದು, ನನ್ನ ಉದ್ದೇಶ ಸಾಧನೆಗಾಗಿ ನೀನಲ್ಲಿರುವೆ, ಯಾವ ಆಸೆಗಳನ್ನಿಟ್ಟುಕೊಳ್ಳುವ ಹಕ್ಕೂ ನಿನಗಿಲ್ಲ. ನಿನಗೇನು ಬೇಕೋ ಅದನ್ನು ಕಾಲಕಾಲಕ್ಕೆ ಪೂರೈಸುವ ಹೊಣೆ ನನ್ನದು. ನಿನ್ನ ಸುಖದ ಜವಾಬ್ದಾರಿ ನನ್ನದು" ಎಂದು ಪ್ರೀತಿ ತುಂಬಿದ ದನಿಯಲ್ಲಿ ಎಚ್ಚರಿಸುವ ದೈವವಾಣಿ ಈಗಲೂ ಕಿವಿಯಲಿ ಅನುರಣಿಸುತಿದೆ.
 
ಅದೇನು ಅವನುದ್ದೇಶವೋ ನೋಡಬೇಕು.


 
(19-8-2013
ರಿಂದ ಮಂಡ್ಯ ಮತ್ತು ಮದ್ದೂರಿನ ನಡುವೆ ಜೋಡಿ ರೈಲು ಮಾರ್ಗ ಕಾರ್ಯಾಚರಿಸುತ್ತಿದೆ, ರೈಲುಗಳು ಹನಕೆರೆಯಲ್ಲಿ ಕ್ರಾಸಿಂಗ್‌ಗಾಗಿ ನಿಲ್ಲುವುದಿಲ್ಲ.)